
ತಿರುಪತಿ: ವಿಶೇಷ ತನಿಖಾ ತಂಡವು ತಿರುಪತಿ ತಿರುಮಲ ದೇವಸ್ಥಾನದ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಿದ ಕುರಿತು ತನಿಖೆ ನಡೆಸುತ್ತಿದ್ದು ಇದೀಗ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಸ್ಫೋಟಕ ಮಾಹಿತಿ ನೀಡಿದ್ದು ಅದೇನೆಂದರೆ ‘2019-2024ರ ಅವಧಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ 11 ಕೋಟಿ ಭಕ್ತರಿಗೆ 48.76 ಕೋಟಿ ಲಡ್ಡು ವಿತರಿಸಲಾಗಿದ್ದು ಇದರಲ್ಲಿ 20 ಕೋಟಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದೆ’ ಎಂದು ಹೇಳಿದ್ದಾರೆ.
‘5 ವರ್ಷಗಳಲ್ಲಿ ಸುಮಾರು 11 ಕೋಟಿ ಭಕ್ತರು ಆಗಮಿಸಿದ್ದು ಅವರಲ್ಲಿ ಯಾರಿಗೆ ಶುದ್ಧ ತುಪ್ಪದ ಲಡ್ಡು ಹಾಗೂ ಯಾರಿಗೆ ನಕಲಿ ತುಪ್ಪದ ಲಡ್ಡು ವಿತರಿಸಲಾಗಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಆದರೆ ಟಿಟಿಡಿ ಮಾರುಕಟ್ಟೆ ದಾಖಲೆಗಳ ಪ್ರಕಾರ, ಈ ಅವಧಿಯಲ್ಲಿ ಹಲವಾರು ಡೈರಿಗಳಿಂದ ಒಟ್ಟು 534.7 ಕೋಟಿ ರು. ಮೌಲ್ಯದ 1.61 ಕೋಟಿ ಕೆಜಿ ತುಪ್ಪ ಖರೀದಿಸಲಾಗಿದೆ. ಇದರಲ್ಲಿ ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಒಡನಾಡಿ ಕಂಪನಿಗಳು ಪೂರೈಸಿದ 68 ಲಕ್ಷ ಕೆ.ಜಿ. ಅಂದರೆ ಒಟ್ಟು ತುಪ್ಪದ ಶೇ.42ರಷ್ಟು ತುಪ್ಪ ನಕಲಿ ಎಂದು ಎಸ್‌ಐಟಿ ಪತ್ತೆ ಹಚ್ಚಿದೆ’ ಎಂದು ನಾಯ್ಡು ಮಾಹಿತಿ ನೀಡಿದ್ದಾರೆ.






















































