29.9 C
Udupi
Tuesday, January 27, 2026
spot_img
spot_img

ಸಂಚಿಕೆ ೧೨೬ ಮಹಾಭಾರತ

ಹಸ್ತಿನಾವತಿಯನ್ನು ಬಿಟ್ಟು ಧೃತರಾಷ್ಟ್ರನ ಆಣತಿಯಂತೆ ಪಾಂಡವರು ರಾಜಮಾತೆ ಕುಂತಿಯ ಜೊತೆ ಖಾಂಡವ ಪ್ರಸ್ಥ ಬಂದು ತಲುಪಿದ್ದಾರೆ. ಬಹಳ ಹಿಂದೆ ಈ ಪ್ರದೇಶ ಪುರೂರವನ ರಾಜಧಾನಿಯಾಗಿ ಕಂಗೊಳಿಸಿದ್ದ ಪಟ್ಟಣ ಪ್ರದೇಶವಾದರೂ ಕಾಲಾಂತರದಲ್ಲಿ ಜೀರ್ಣಗೊಂಡು ಬಹುಪಾಲು ಕಾಡಾಗಿದೆ. ಅತ್ಯಲ್ಪ ಪ್ರಮಾಣದಲ್ಲಿ ಜನ ವಸತಿ ಯೋಗ್ಯ ಊರು ಉಳಿದಿದೆ. ಪಾಂಡವರು ಖಾಂಡವ ಪ್ರಸ್ಥ ಪ್ರದೇಶಕ್ಕೆ ಆಗಮಿಸಿರುವ ವಿಷಯವರಿತು ದ್ವಾರಕೆಯಿಂದ ಶ್ರೀಕೃಷ್ಣ ಪರಮಾತ್ಮನೂ ಅಲ್ಲಿಗೆ ಆಗಮಿಸಿದನು. ಕುಂತಿಗೆ ತನ್ನ ಅಳಿಯ ಕೃಷ್ಣನನ್ನು ಕಂಡು ಮಹಾಬಲ ಪ್ರಾಪ್ತವಾದಂತೆ ಭಾಸವಾಯಿತು. ಶ್ರೀಕೃಷ್ಣನು ದೇವಶಿಲ್ಪಿಯಾದ ವಿಶ್ವಕರ್ಮನನ್ನು ಸ್ಮರಿಸಿ ಬರಮಾಡಿಕೊಂಡು ಪಾಂಡವರಿಗಾಗಿ ಸುವ್ಯವಸ್ಥಿತವೂ ಅಭೇದ್ಯವೂ ಆದ ಒಂದು ಸುಂದರ ರಾಜಧಾನಿ ನಗರಿಯನ್ನು ನಿರ್ಮಿಸುವಂತೆ ಕೇಳಿಕೊಂಡನು.

ಶ್ರೀ ಕೃಷ್ಣ ಪರಮಾತ್ಮನ ಅಪೇಕ್ಷೆಯಂತೆ ಪಾಂಡವರ ವಾಸಕ್ಕಾಗಿ ವಿಧ ವಿಧ ಅರಮನೆಗಳು, ವಿವಿಧ ಮಹಲುಗಳು, ಪರಿವಾರ ಗೃಹಗಳು, ಅಂತಃಪುರಗಳು, ಭದ್ರವಾದ ಕೋಟೆಗಳು ನಿರ್ಮಾಣಗೊಂಡವು. ಸೌಂದರ್ಯಕ್ಕಾಗಿ ನಯನ ಮನೋಹರ ರಾಜಬೀದಿಗಳು, ವ್ಯವಹಾರ ಮಳಿಗೆ ಸಾಲುಗಳು, ನಾಗರಿಕ ವಠಾರಗಳು, ಪುರ ಪ್ರಮುಖರ ವಸತಿಗಳು, ರಕ್ಷಣಾ ಠಾಣೆಗಳು, ಅನ್ನ ಛತ್ರಗಳು, ಆಶ್ರಮಗಳು, ಪ್ರವಾಸಿಗರಿಗೆ ಯಾತ್ರಿ ನಿವಾಸ, ಅತಿಥಿಗಳಿಗೆ ಅತಿಥಿಗೃಹ, ಉದ್ಯಾನವನ, ಸರೋವರ, ವಿಶಾಲ ಕ್ರೀಡಾಂಗಣಗಳು, ವಿದ್ಯಾಶ್ರಮ, ಜ್ಞಾನಾಶ್ರಮ, ಧ್ಯಾನಾಶ್ರಮಗಳು, ಪ್ರಾರ್ಥನಾ ಮಂದಿರ, ದೇವಸ್ಥಾನಗಳು, ಸರೋವರಗಳು, ಆಯುಧ ಶಾಲೆಗಳು, ಉಪಚಾರ ಗೃಹಗಳು, ಶುಶ್ರೂಷಾ ಕೇಂದ್ರಗಳು, ರಂಗ ಮಂದಿರಗಳು, ಕಲಾ ಕೇಂದ್ರಗಳು ಹೀಗೆ ಏನೊಂದನ್ನೂ ಬಿಡದೆ ಸ್ವರ್ಗ ಸಮನಾದ ಅದ್ಬುತ ಕೌತುಕ ವೈಶಿಷ್ಟ್ಯಗಳ ನಗರವೊಂದು ವಿಶ್ವಕರ್ಮನ ಕೈಚಳಕದಲ್ಲಿ ನಿರ್ಮಿತವಾಯಿತು. ಪಂಚ ಇಂದ್ರರೇ ಪಾಂಡವರಾಗಿ ಹುಟ್ಟಿರುವುದರಿಂದಾಗಿ ಅವರು ವಾಸಿಸುವ ನಗರಕ್ಕೆ “ಇಂದ್ರಪ್ರಸ್ಥ” ಎಂಬ ಶುಭನಾಮವನ್ನೂ ವಿಶ್ವಕರ್ಮನೇ ಹೆಸರಿಸಿದನು. ಕಾರ್ಯ ಪೂರ್ಣಗೊಂಡಾಗ ಶಾಸ್ತ್ರ ಪ್ರವೀಣರಾದ ಧರ್ಮರಾಯ – ಸಹದೇವ ಜೊತೆಯಾಗಿ ಸಮಲೋಚನೆಗೈದು ಗ್ರಹಬಲ – ತಾರಾಬಲಗಳನ್ನು ಹೊಂದಿಸಿ ಶುಭ ಮುಹೂರ್ತವನ್ನು ನಿಗದಿಪಡಿಸಿದರು. ವಿಧಿವತ್ತಾಗಿ ಧಾರ್ಮಿಕ ವಿಧಾನ, ಹೇರಳ ದಾನ ಧರ್ಮಗೈದು ನಗರ ಪ್ರವೇಶ ಮಾಡಿದರು. ಧರ್ಮರಾಯ ಸಿಂಹಾಸನವೇರಿ ರಾಜನಾಗಿ ರಾಜ್ಯಭಾರ ಆರಂಭಿಸಿದನು. ಸುಂದರ ನಗರಿಯ ಕರ್ತೃ ವಿಶ್ವಕರ್ಮನನ್ನು ಸತ್ಕರಿಸಿ ಕೃತಜ್ಞತಾಪೂರ್ವಕ ಸನ್ಮಾನಿಸಿ ಯಥೋಚಿತ ಪುರಸ್ಕಾರಗಳನ್ನಿತ್ತು ಬೀಳ್ಕೊಟ್ಟರು. ಪಾಂಡವರಿಗೆ ಸುವ್ಯವಸ್ಥೆಯಾದ ಬಳಿಕ ಕೃಷ್ಣನೂ ದ್ವಾರಕೆಗೆ ಹೊರಟು ಹೋದನು.

ಕುಂತಿದೇವಿ ನಿರಾತಂಕಳಾಗಿ, ತನ್ನ ಮಕ್ಕಳ ಸಂತೋಷ, ವೈಭವ ಕಂಡು ಪರಮಾನಂದಗೊಂಡಿದ್ದಳು. ಇಲ್ಲಿ ಅನ್ಯರ ಹಂಗಿಲ್ಲ, ತುಚ್ಚ ಮಾತುಗಳಿಲ್ಲ, ಕಿರುಕುಳವಿಲ್ಲ, ಅಂಜಿಕೆ ಅಳುಕುಗಳಿಲ್ಲ, ಅವಿಶ್ವಾಸವಿಲ್ಲ, ವಂಚನೆಯ ಭಯವಿಲ್ಲ, ಮನೋವ್ಯಥೆಯೂ ಇಲ್ಲ. ಧರ್ಮರಾಜ ಅರಸನಾಗಿ ಧರ್ಮಿಷ್ಠನಾಗಿ ರಾಜ್ಯಭಾರ ಮಾಡುತ್ತಿದ್ದಾನೆ. ಭೀಮಾರ್ಜುನ, ನಕುಲ ಸಹದೇವಾದಿಗಳು ಅಗ್ರಜನ ಆಜ್ಞಾನುವರ್ತಿಗಳಾಗಿ ಸಮರ್ಥ ಆಳ್ವಿಕೆಗೆ ಪೂರಕ ಪ್ರೇರಕರಾಗಿದ್ದಾರೆ. ದಿನದಿಂದ ದಿನಕ್ಕೆ ರಾಜ್ಯ ಸಮೃದ್ಧಿಗಳ್ಳುತ್ತಾ ರಾಜ್ಯದಲ್ಲಿ ಜ್ಞಾನಾರ್ಜನೆ, ಸಂರಕ್ಷಣೆ, ವಾಣಿಜ್ಯ, ಕೃಷಿ ಇತ್ಯಾದಿ ವೃದ್ಧಿಗೊಳ್ಳುತ್ತಿದೆ. ಈ ಸತ್ಕೀರ್ತಿ ದಶದಿಕ್ಕುಗಳಿಗೂ ಹಬ್ಬಿದಾಗ ಬಹುಮಂದಿ ದೂರದೂರುಗಳಿಂದ ವಲಸೆ ಬಂದು ಇಂದ್ರಪ್ರಸ್ಥದ ಪ್ರಜೆಗಳಾಗಿ ನೆಲೆಸಿಕೊಂಡರು. ಜನಸಂಖ್ಯೆಯೂ ವೃದ್ಧಿಯಾಗತೊಡಗಿತು. ಕ್ರಮೇಣ ತನ್ನ ಯುವಕ ಪ್ರಜೆಗಳಿಗೆ ವಿದ್ಯಾರ್ಜನೆ, ಸಮರಕಲೆಯಾದಿ ಶಿಕ್ಷಣ ನೀಡತೊಡಗಿದರು. ಯುದ್ದ ಕಲೆಗಳನ್ನು ಕಲಿತು, ಆಯುಧ ಪ್ರಹಾರ, ಆಕ್ರಮಣ ಸೂಕ್ಷ್ಮಗಳಲ್ಲೂ ಪರಿಣತಿ ಪಡೆದ ಯುವಕರೇ ಇಂದ್ರಪ್ರಸ್ಥ ದ ಸೈನ್ಯವಾಗಿ ಬೆಳೆದರು. ಋಷಿ ಧೌಮ್ಯರೂ ಪಾಂಡವರ ಜೊತೆ ಸೇರಿ ಧಾರ್ಮಿಕ ಸಮೃದ್ಧಿಗೂ ಕಾರಣರಾದರು. ಹೀಗೆ ಸಕಲ ವಿಚಾರದಲ್ಲೂ ಪಾಂಡವರ ರಾಜ್ಯ ಪ್ರಖ್ಯಾತಿ ಪಡೆಯತೊಡಗಿತು.

ಹೀಗಿರಲು ಒಂದು ದಿನ ನಾರದರು ಇಂದ್ರಪ್ರಸ್ಥಕ್ಕೆ ಬಂದರು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page