
ಕಾಠ್ಮಂಡು: ಸಾಧಿಸಬೇಕು ಎನ್ನುವ ಇಚ್ಛಾ ಶಕ್ತಿ ಹೊಂದಿರುವವರಿಗೆ ದೈಹಿಕ ನ್ಯೂನ್ಯತೆಗಳು ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವ ಮಾತನ್ನು ಕೇಳಿದ್ದೇವೆ. ಇದು ನಿಜವೆಂಬಂತೆ ಮೂರು ವಿಧದ ಅಂಗವೈಕಲ್ಯವಿದ್ದರೂ ಗೋವಾ ಮೂಲದ 30 ವರ್ಷದ ತಿಂಕೇಶ್ ಕೌಶಿಕ್ ಎನ್ನುವ ವ್ಯಕ್ತಿ ಸಮುದ್ರ ಮಟ್ಟದಿಂದ 17,598 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತುದಿಯನ್ನು ತಲುಪಿ ದಾಖಲೆ ಬರೆದಿದ್ದಾರೆ.
ಕೌಶಿಕ್ 9 ವರ್ಷದವರಿದ್ದಾಗ ಹರಿಯಾಣದಲ್ಲಿ ನಡೆದ ವಿದ್ಯುತ್ ಅಪಘಾತವೊಂದರಲ್ಲಿ ತನ್ನ ಕಾಲು, ಕೈ ಮತ್ತು ಮಂಡಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ಕೃತಕ ಅಂಗಗಳನ್ನು ಬಳಸುತ್ತಿದ್ದಾರೆ. ಸದ್ಯ ಗೋವಾದಲ್ಲಿ ಫಿಟ್ನೆಸ್ ಕೋಚ್ ಆಗಿಯೂ ಕೆಲಸ ಮಾಡುತ್ತಿರುವ ಕೌಶಿಕ್ ತಮ್ಮ ಈ ವೃತ್ತಿಯ ಕಾರಣ ಮೌಂಟ್ ಎವರೆಸ್ಟ್ ಟ್ರೆಕ್ಕಿಂಗ್ ಸುಲಭವಾಗಬಹುದು ಎಂದು ಆರಂಭದಲ್ಲಿ ಭಾವಿಸಿದ್ದರು. ಆದರೆ ಕೃತಕ ಅಂಗಗಳನ್ನು ಬಳಸಿದ ಕಾರಣ ಹಾದಿ ಬಹಳ ಕಷ್ಟವಾಗಿತ್ತು. ಅದನ್ನೆಲ್ಲ ದಾಟಿ ಈ ಸಾಧನೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಕೌಶಿಕ್ ‘ದೈಹಿಕ ನ್ಯೂನ್ಯತೆಗಳನ್ನೂ ಮೀರಿ ತಾನು ಈ ಸಾಧನೆಯನ್ನು ಮಾಡುವುದಕ್ಕೆ ತನ್ನ ಮನಸ್ಸಿನ ದೃಢತೆಯೇ ಕಾರಣ’ ಎಂದು ಹೇಳಿದ್ದಾರೆ.































































































































