
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನಗರದ ಹೊಸೂರು ರಸ್ತೆಯ ಆಫ್ ಇನ್ಫೋರ್ಮೇಷನ್ ಟೆಕ್ನಾಲಜಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದು ಈ ವೇಳೆ ವಾಹನಗಳನ್ನು ಅಪ್ರಾಪ್ತ ಮಕ್ಕಳಿಗೆ ನೀಡುವ ಪೋಷಕರ ವಿರುದ್ಧ ಬಾಲಾಪರಾಧಿ ನ್ಯಾಯಿಕ ಕಾಯ್ದೆ (ಜೆಜೆ ಆಕ್ಟ್)ಯಡಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋರಮಂಗಲದ ನಿವಾಸಿ ಪಾರ್ವತಿ ರಸ್ತೆಯಲ್ಲಿ ಅತಿವೇಗವಾಗಿ ಮನಬಂದಂತೆ ಮಕ್ಕಳು ವಾಹನ ಚಾಲನೆ ಮಾಡುವ ಬಗ್ಗೆ ಪ್ರಶ್ನೆ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಆಪ್ರಾಪ್ತ ಮಕ್ಕಳ ಪೋಷಕರಿಗೆ ಕಾನೂನಿನ ಪಾಠ ಮಾಡಿದರು.
ವಾಹನ ಚಾಲನೆಗೆ 18 ವರ್ಷ ಮೇಲ್ಪಟ್ಟದ ವಯಸ್ಸು ನಿಗದಿಗೂ ಸಹ ವೈಜ್ಞಾನಿಕ ಕಾರಣವಿದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ತಮ್ಮ ಮಕ್ಕಳಷ್ಟೆ ಬುದ್ದಿವಂತರಾಗಿದ್ದರೂ ಸಹ 18 ವರ್ಷಕ್ಕೆ ಅವರ ಮೆದುಳು ಸಂಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ. ಹೀಗಾಗಿ ವಾಹನಗಳ ಚಾಲನೆಗೆ ವಯಸಿನವರಿಗೆ ನಿರ್ಬಂಧವಿದೆ. ಇತ್ತೀಚೆಗೆ ಅಪಘಾತ ಪ್ರಕರಣದಲ್ಲಿ ಜೆ.ಜೆ. ಕಾಯ್ದೆಯಡಿ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿ ಕೂಡಾ ವಾಹನಗಳನ್ನು ಚಲಾಯಿಸಲು ಅಪ್ರಾಪ್ತ ಮಕ್ಕಳಿಗೆ ನೀಡುವ ಪೋಷಕರ ಮೇಲೆ ಜಿಜೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.