
ಪ್ರಯಾಗ್ರಾಜ್: ಬರೋಬ್ಬರಿ 144 ವರ್ಷಗಳಿಗೊಮ್ಮೆ ಬರುವ ಕಳೆದ 45 ದಿನಗಳಿಂದ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿದ್ದ, ಜಗತ್ತು ಕಂಡ ಅತ್ಯಂತ ದೊಡ್ಡ ಉತ್ಸವ, ಭಕ್ತಿ, ಅಧ್ಯಾತ್ಮ, ನಂಬಿಕೆ, ಶ್ರದ್ಧೆ, ತಂತ್ರಜ್ಞಾನದ ಮಹಾ ಸಂಗಮವಾದ ಮಹಾಕುಂಭ ಮೇಳಕ್ಕೆ ಇಂದು ತೆರೆ ಬಿದ್ದಿದೆ.
ಜನವರಿ 13ರಂದು ಆರಂಭವಾಗಿ ಶಿವರಾತ್ರಿಯ ಮಹಾಪರ್ವದವರೆಗೆ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 66 ಕೋಟಿ ಜನ ಪುಣ್ಯಸ್ನಾನ ಮಾಡಿದ್ದು ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿಯ ಪವಿತ್ರ ಸಂಗಮದಲ್ಲಿ ಮಿಂದೆದ್ದು ಸಾರ್ಥಕತೆ ಪಡೆದಿದ್ದಾರೆ.
ನಾಗಾಸಾಧುಗಳು, ಸನ್ಯಾಸಿ-ಸಾಧ್ವಿಯರು, ವ್ಯಾಪಾರಸ್ಥರು, ಪತ್ರಕರ್ತರು, ನೃತ್ಯ-ನಾಟಕ-ಪ್ರದರ್ಶನಕಾರರು ಹೀಗೆ ದೇಶದ ಮೂಲೆಮೂಲೆಗಳಿಂದ ಕುಂಭಕ್ಕೆ ಆಗಮಿಸಿದ್ದ ಜನ ತಮ್ಮ ತಮ್ಮ ಸ್ಥಾನಗಳಿಗೆ ಮರಳಿದ್ದಾರೆ. ಆದರೆ ಮಹಾಕುಂಭ ಕಟ್ಟಿಕೊಟ್ಟ ನೆನಪು, ಅನುಭವಗಳು ಮಾತ್ರ ಜನರನ್ನು ಶತಮಾನಕಾಲ ಕಾಡಲಿವೆ. ಮುಂದಿನ ಕುಂಭಮೇಳವು 2027ಕ್ಕೆ ಮಹಾರಾಷ್ಟ್ರದ ನಾಸಿಕ್ನ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ.









