
ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಇದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಚಲಿಸಲು ಮತ್ತು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಬದುಕುತ್ತಿದ್ದ ಮಗನ ಯಾತನೆಗೆ ಅಂತ್ಯಗೊಳಿಸಲು ಅವರ ವೃದ್ಧ ಪೋಷಕರು ನ್ಯಾಯಾಲಯವನ್ನು ಮೊರೆಹೋಗಿದ್ದು ಇದೀಗ ನ್ಯಾಯಾಲಯವು ಅಸ್ತು ಎಂದಿದೆ.
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ರಾಣಾ, 2013ರ ಆಗಸ್ಟ್ 20ರಂದು ಪಿಜಿ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಆ ಬಳಿಕ ಅವರು ಕೋಮಾ ಸ್ಥಿತಿಯಲ್ಲೇ ಇದ್ದು, ಟ್ರಾಕಿಯೊಸ್ಟೊಮಿ ಮತ್ತು ಗ್ಯಾಸ್ಟ್ರೋಸ್ಟೊಮಿ ಟ್ಯೂಬ್‌ಗಳ ಸಹಾಯದಿಂದ ಬದುಕುತ್ತಿದ್ದರು.
ಏಮ್ಸ್ ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿಯಲ್ಲಿ ಅವರ ಚೇತರಿಕೆಯ ಸಾಧ್ಯತೆ ಇಲ್ಲ ಎಂದು ತಿಳಿಸಲಾಗಿದ್ದು, ಈ ಹಿನ್ನೆಲೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠ ದಯಾಮರಣಕ್ಕೆ ಅನುಮತಿ ನೀಡಿದೆ.





















































































