
ಬೆಂಗಳೂರು: ನಗರದಲ್ಲಿನ ಸಣ್ಣ ಹಾಗೂ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಗ್ರಾಹಕರು ಗಂಟೆಗಟ್ಟಲೆ ಕುಳಿತು ಕಾಲಹರಣ ಮಾಡುವುದರಿಂದ ಹೋಟೆಲ್ ಮಾಲೀಕರಿಗೆ ತೊಂದರೆ ಹೆಚ್ಚಾಗಿದೆ. ಒಂದೇ ಟೀ ಅಥವಾ ಕಾಫಿ ಸೇವಿಸಿ ದೀರ್ಘ ಸಮಯ ಕುಳಿತು ಸಭೆ, ವ್ಯವಹಾರ ಹಾಗೂ ಖಾಸಗಿ ಚರ್ಚೆ ನಡೆಸುತ್ತಿರುವುದರಿಂದ ನಿಜವಾದ ಗ್ರಾಹಕರಿಗೆ ಆಸನ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಸಮಸ್ಯೆಗೆ ಪರಿಹಾರವಾಗಿ, ಹೋಟೆಲ್‌ಗಳಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಕುಳಿತರೆ ‘ಟೇಬಲ್ ಚಾರ್ಜ್’ ಅಥವಾ ದಂಡ ವಿಧಿಸುವ ಬಗ್ಗೆ ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ. ಅಗತ್ಯವಿದ್ದರೆ 500 ರಿಂದ 1,000 ರೂ.ವರೆಗೆ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆದಿದ್ದು, ಈ ಕುರಿತು ಸರ್ಕಾರದ ಅನುಮತಿ ಪಡೆಯಲು ಸಂಘ ಸಿದ್ಧತೆ ನಡೆಸುತ್ತಿದೆ.
ಸರ್ಕಾರದ ಒಪ್ಪಿಗೆ ದೊರೆತರೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲೂ ಈ ನಿಯಮ ಜಾರಿಗೆ ಬರಲಿದೆ. ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



















