
ಬೆಂಗಳೂರು : ಇನ್ನೆರಡು ದಿನಗಳಲ್ಲಿ ಜಗತ್ತು ಹೊಸ ವರ್ಷಕ್ಕೆ ಕಾಲಿಡುತ್ತಿದ್ದು ಹೀಗಾಗಿ ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಮತ್ತಿನಲ್ಲಿ ಮಹಿಳೆಯರ ಜತೆ ಅನುಚಿತ ವರ್ತನೆ ತೋರುವ ಪುಂಡರ ಮೇಲೆ ಸಿಸಿಟಿವಿ ಬಿಗಿ ಕಣ್ಗಾವಲಿದ್ದು, ಸಂಭ್ರಮ ಮುಗಿದು ವಾರದ ಬಳಿಕವೂ ಪ್ರಕರಣ ದಾಖಲಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನಾಕರ್ಷಣೆಯ ಕೇಂದ್ರಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಹಾಗೂ ಇಂದಿರಾ ನಗರ ಸೇರಿ ನಗರದ ಪ್ರಮುಖ ಸ್ಥಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಲ್ಲಿ ಫೇಸ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಸಹ ಬಳಸಲಾಗಿದ್ದು, ಕೆಲವು ಕಡೆ ಮ್ಯಾಜಿಕ್ ಬಾಕ್ಸ್ ಹಾಕಲಾಗಿದೆ. ಇದರಲ್ಲಿ ಖಾಸಗಿ ಕ್ಯಾಮೆರಾಗಳನ್ನು ಕಾರ್ಯಕ್ರಮ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕ್ಯಾಮೆರಾಗಳ ದೃಶ್ಯಾವಳಿಯನ್ನು ಸಹ ಅವಲೋಕಿಸಲಾಗುತ್ತದೆ. ಇದರಲ್ಲಿ ಅನುಚಿತ ವರ್ತನೆ ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
ಹೊಸ ವರ್ಷಾಚರಣೆ ಮುಗಿದ ಬಳಿಕ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಪೊಲೀಸರು ಕಲ್ಪಿಸಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಆಟೋ ಸಿಗದೆ ಜನರು ಪರದಾಡುತ್ತಿದ್ದು ಆದರೆ ಈ ಬಾರಿ ಖಾಸಗಿ ಹಾಗೂ ಬಿಎಂಟಿಸಿ ಸಹಕಾರದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಆ ಬಸ್‌ಗಳಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.





