
ಟೆಹ್ರಾನ್: ಇರಾನ್ ಅಧ್ಯಕ್ಷರಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಇರಾನ್‍ನ ವಾಯುವ್ಯ ಪರ್ವತ ಪ್ರದೇಶದ ಜೋಲ್ಫಾದಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸ್ಥಳವನ್ನು ಮಾನವರಹಿತ ವಿಮಾನ (ಯುಎವಿ) ಗುರುತಿಸಿದೆ ಎಂದು ಟರ್ಕಿಯ ಸರ್ಕಾರಿ ಸುದ್ದಿ ಸಂಸ್ಥೆ ಅನಾಡೊಲು ವರದಿ ಮಾಡಿದೆ.ಪತನಗೊಂಡಿದ್ದ ಹೆಲಿಕಾಪ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಸಹ ಸಾವಿಗೀಡಾಗಿರುವ ಶಂಕೆ ಇದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಪರ್ವತ ಶ್ರೇಣಿಗಳ ನಡುವೆ ಇಬ್ರಾಹಿಂ ರೈಸಿ ಹಾಗೂ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪ್ಯರಿತ್ಯದಿಂದ ಭಾನುವಾರ ಸಂಜೆ (ಮೆ 19) ಪತನಗೊಂಡಿತ್ತು. ಹೆಲಿಕಾಪ್ಟರ್ ಹಾರಾಟದ ಸುಮಾರು 30 ನಿಮಿಷಗಳ ನಂತರ ಸಂಪರ್ಕವನ್ನು ಕಳೆದುಕೊಂಡಿತ್ತು.ಇಬ್ರಾಹಿಂ ರೈಸಿ ಮತ್ತು ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಗಡಿಭಾಗದಲ್ಲಿ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿ ಇರಾನಿನ ನಗರ ತಬ್ರಿಜ್‍ಗೆ ಹಿಂದಿರುಗುವ ಈ ಘಟನೆ ಸಂಭವಿಸಿತ್ತು.