ದಾವಣಗೆರೆಯಲ್ಲಿ ಇಂದು ಅಂತಿಮ ದರ್ಶನ

ದಾವಣಗೆರೆ: ಕಾಂಗ್ರೆಸ್ನ ಹಿರಿಯ ರಾಜಕಾರಣಿ, ಶಿಕ್ಷಣ ಪ್ರೇಮಿ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಲಿಂಗೈಕ್ಯರಾಗಿದ್ದು, ಇಂದು ಸಂಜೆ ದಾವಣಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ನಸುಕಿನ ಜಾವ ಶಾಮನೂರರ ಪಾರ್ಥಿವ ಶರೀರ ಬೆಂಗಳೂರಿನಿಂದ ದಾವಣಗೆರೆಗೆ ಆಗಮಿಸಿದ್ದು ಬೆಳಗ್ಗೆ 7 ರಿಂದ 12 ರ ವರೆಗೆ ಪುತ್ರ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಪಾರ್ಥಿವ ಶರೀರ ಇರಲಿದೆ. ಇಲ್ಲಿ ಕುಟುಂಬ ಸದಸ್ಯರಷ್ಟೆ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಲಿದ್ದು, ಇಲ್ಲಿ ವಿವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಹೃದಯ ಭಾಗವಾದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಆನೆಕೊಂಡದ ಶಾಮನೂರ ಮನೆತನದ ಕಲ್ಲೇಶ್ವರ ರೈಸ್ ಮಿಲ್ ಜಾಗಕ್ಕೆ ಕರೆತಂದು ಸಂಜೆ 5:30 ಸೂರ್ಯ ಮುಳುಗುವುದರ ಒಳಗಾಗಿ, ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ವಿಧಿವಿಧಾನಗಳು ನಡೆಯಲಿದೆ. ಶಾಮನೂರು ಶಿವಶಂಕರಪ್ಪ ತಂದೆ, ತಾಯಿ, ಸಹೋದರರು ಹಾಗೂ ಧರ್ಮಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಿವಶಂಕರಪ್ಪ ಅಂತ್ಯಸಂಸ್ಕಾರ ನಡೆಯಲಿದೆ.





