ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ”ಹಿರಿಯರೆಡೆಗೆ ಸಾಹಿತ್ಯದ ನಡಿಗೆ”

ಕಾರ್ಕಳ :-ಬದುಕಿನ ಅರ್ಥವನ್ನು ತಿಳಿದು ಬಾಳುವುದೇ ನಿಜ ಬದುಕು. ಈ ನಿಟ್ಟಿನಲ್ಲಿ ಹಿರಿದಾದ ಬಾಳ ಪಯಣದಲ್ಲಿ ಸಾಗಿ ಬಂದ ಹಿರಿಯರ ಜೀವನಾನುಭವಗಳೇ ನಮ್ಮ ಬದುಕಿಗೆ ಬೆಳಕಾಗುತ್ತದೆ. ಹಿರಿಯರು ಸವೆಸಿದ ದಾರಿ, ಎದುರಿಸಿದ ಸವಾಲುಗಳು ಹಾಗೂ ಗಳಿಸಿದ ಅನುಭವಗಳು ಇಂದಿನ ಪೀಳಿಗೆಯವರಿಗೆ ಬದುಕಿನ ಪಾಠವಾಗುತ್ತವೆ. ಇಂತಹ ಹಿರಿಯರನ್ನು ಗೌರವಿಸಿ ಅವರೊಡನೆ ಸಂವಾದವನ್ನು ಏರ್ಪಡಿಸಿರುವುದು ಅಭಿನಂದನೀಯ ಎಂದು ಕಾರ್ಕಳದ ಹಿರಿಯ ಸಾಹಿತಿ ಸಾವಿತ್ರಿ ಮನೋಹರ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ದುರ್ಗಾ ತೆಳ್ಳಾರಿನ ಹಿರಿಯ ಸಮಾಜ ಸೇವಕ ಪ್ರಗತಿಪರ ಕೃಷಿಕರಾದ ಉಪ್ಪಂಗಳ ಬಲಾಜೆ ಕೃಷ್ಣ ಭಟ್ ಅವರನ್ನು ಸಂಮಾನಿಸಿ ಮಾತಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಕಾರ್ಕಳ ಘಟಕದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರು ಸಾಮಾಜಿಕ,ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಬಲಾಜೆ ಕೃಷ್ಣ ಭಟ್ಟರವರು ಸಲ್ಲಿಸಿದ ಸೇವೆಗಳನ್ನು ತಿಳಿಸಿ ಅಭಿನಂದಿಸಿದರು. ಆಶಯ ನುಡಿಗಳನ್ನಾಡಿದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಹಿರಿಯರ ಸಾಧನೆಯನ್ನು ಸ್ಮರಿಸಿ ಗೌರವಿಸುವುದರ ಮೂಲಕ ಇದು ಇತರರಿಗೆ ಪ್ರೇರಣೆ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ನಿತ್ಯಾನಂದ ಪೈ, ಜಿಲ್ಲಾ ಕಸಾಪದ ಗೌರವ ಕೋಶಾಧಿಕಾರಿ ಮನೋಹರ್ ಪಿ, ಜಲದುರ್ಗಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯ ಗೌಡ, ನಿವೃತ್ತ ಮುಖ್ಯೋಪಾಧ್ಯಾಯಿನಿ ಹರ್ಷಿಣಿ ಕೆ, ದುರ್ಗಾ ತೆಳ್ಳಾರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸ್ಮಿತಾ ಭಂಡಾರಿ, ಕಸಾಪ ಸದಸ್ಯರಾದ ಡಾ ಸುಮತಿ, ಶಿವ ಸುಬ್ರಹ್ಮಣ್ಯ ಭಟ್, ನಾಗೇಶ್ ನಲ್ಲೂರ್, ಸುಲೋಚನಾ, ತಿಪ್ಪೇಸ್ವಾಮಿ ಹಾಗೂ ಸನ್ಮಾನಿತರ ಕುಟುಂಬ ಸದಸ್ಯರೂ ಉಪಸ್ಥಿತರಿದ್ದರು,
ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿ, ಕಸಾಪ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿ ನಿವೃತ್ತ ಮುಖ್ಯೋಪಾಧ್ಯಾಯ ಸಂಜೀವ ದೇವಾಡಿಗ ವಂದಿಸಿದರು.