19.3 C
Udupi
Thursday, January 22, 2026
spot_img
spot_img
HomeBlogಹಾಸ್ಯದ ಹೆಸರಿನಲ್ಲಿ ದೇವತೆಗಳ ಅವಹೇಳನೆಗೆ ಹೈಕೋರ್ಟ್ ಕಟು ಎಚ್ಚರಿಕೆ: ‘ಕಾಮಿಡಿ ಕಿಲಾಡಿಗಳು’ ಕುರಿತು ನ್ಯಾಯಾಲಯದ ಅಸಮಾಧಾನ

ಹಾಸ್ಯದ ಹೆಸರಿನಲ್ಲಿ ದೇವತೆಗಳ ಅವಹೇಳನೆಗೆ ಹೈಕೋರ್ಟ್ ಕಟು ಎಚ್ಚರಿಕೆ: ‘ಕಾಮಿಡಿ ಕಿಲಾಡಿಗಳು’ ಕುರಿತು ನ್ಯಾಯಾಲಯದ ಅಸಮಾಧಾನ

ಬೆಂಗಳೂರು: ಮಂಗಳವಾರ ಕರ್ನಾಟಕ ಹೈಕೋರ್ಟ್ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಾಸ್ಯದ ಹೆಸರಿನಲ್ಲಿ ಹಿಂದೂ ದೇವತೆಗಳು ಹಾಗೂ ಪೌರಾಣಿಕ ಪಾತ್ರಗಳನ್ನು ಅವಹೇಳನಕಾರಿಯಾಗಿ ಚಿತ್ರಿಸುವುದರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ದೇವತೆಗಳನ್ನು ‘ಪ್ರಯೋಜನವಿಲ್ಲದವರು’ ಎಂಬಂತೆ ಬಿಂಬಿಸಿರುವುದನ್ನು ಕಟುವಾಗಿ ಟೀಕಿಸಿದ ನ್ಯಾಯಾಲಯದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಜೀ ಎಂಟರ್‌ಪ್ರೈಸಸ್ ಮತ್ತು ಕಾರ್ಯಕ್ರಮದ ನಿರ್ದೇಶಕರ ವಿರುದ್ಧ ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿತು. ‘ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ನೀವು ಏನು ಬೇಕಾದರೂ ಪ್ರಸಾರ ಮಾಡಬಹುದೇ? ದೇವರು ಮತ್ತು ಪೌರಾಣಿಕ ವ್ಯಕ್ತಿಗಳನ್ನು ಅತ್ಯಂತ ತುಚ್ಛವಾಗಿ ತೋರಿಸುವವರಿಗೆ ಯಾವುದೇ ರೀತಿಯ ಮನ್ನಣೆ ನೀಡಲು ಸಾಧ್ಯವಿಲ್ಲ. ಅಂತಹವರು ನ್ಯಾಯಾಲಯದಿಂದ ಯಾವುದೇ ರಕ್ಷಣೆಯನ್ನು ನಿರೀಕ್ಷಿಸಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಪ್ರಶಾಂತ್ ಶಶಿಧರ್ ನರಗುಂದ ಎಂಬುವವರು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಹಿಂದೂ ದೇವತೆಗಳನ್ನು ಹಾಸ್ಯದ ವಸ್ತುವನ್ನಾಗಿಸಿ, ದೇವರ ಘನತೆಗೆ ಕುಂದು ತರುವಂತೆ ಸ್ಕಿಟ್ ಮಾಡಲಾಗಿತ್ತು ಎಂದು ಆರೋಪಿಸಿ ದೂರು ದಾಖಲಿಸಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 299 ರ ಅಡಿಯಲ್ಲಿ ಈ ಪ್ರಕರಣ ದಾಖಲಾಗಿತ್ತು.

ವಾಹಿನಿಯ ಪರ ವಕೀಲರು ‘ಇದು ನೇರವಾಗಿ ದೇವರನ್ನು ಉದ್ದೇಶಿಸಿ ಮಾಡಿದ ಸ್ಕಿಟ್ ಅಲ್ಲ, ಬದಲಾಗಿ ನಾಟಕದ ರಿಹರ್ಸಲ್ ಹೇಗಿರುತ್ತದೆ ಎಂಬ ಹಳ್ಳಿಗರ ಹಾಸ್ಯದ ಭಾಗವಾಗಿತ್ತು’ ಎಂದು ವಾದ ಮಂಡಿಸಿದ್ದರು.

ವಾದ-ವಿವಾದ ಆಲಿಸಿದ ಹೈಕೋರ್ಟ್, ವಾಹಿನಿಯ ಪ್ರತಿನಿಧಿಗಳು ಮತ್ತು ಕಾರ್ಯಕ್ರಮದ ನಿರ್ದೇಶಕರು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂಬ ಷರತ್ತಿನ ಮೇಲೆ ಅವರನ್ನು ಸದ್ಯಕ್ಕೆ ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ. ಆದರೆ, ತನಿಖೆಯನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದ್ದು, ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಜಾಗರೂಕತೆಯಿಂದ ಇರುವಂತೆ ಎಚ್ಚರಿಕೆ ನೀಡಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page