
ಬೆಂಗಳೂರು: ಹಾನಿಕಾರಕ ಆಹಾರವನ್ನು ಮಾರಾಟ ಮಾಡುವುದು, ಸುಳ್ಳು ಮಾಹಿತಿ ನೀಡುವುದು, ಕ್ರಿಮಿನಲ್ ಪಿತೂರಿ ಸೇರಿದಂತೆ ಇತರ ಅಪರಾಧಗಳನ್ನು ಮಾಡಿರುವುದಾಗಿ ಬಿಲ್ಡರ್ ಒಬ್ಬರು ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್ ವಿರುದ್ಧ ದೂರು ಸಲ್ಲಿಸಿದ್ದು ಹೀಗಾಗಿ ಸೋಮವಾರ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ರಾಘವೇಂದ್ರ ರಾವ್ ಸೇರಿದಂತೆ ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ಕಾರ್ಯನಿರ್ವಾಹಕ ಸುಮಂತ್ ಲಕ್ಷ್ಮಿನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ.
ಮಾರತ್‌ಹಳ್ಳಿ ನಿವಾಸಿ ನಿಖಿಲ್ ಎನ್ ಎಂಬವರು ಜುಲೈ 24 ರಂದು ಕೆಫೆಯ ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ (ಟರ್ಮಿನಲ್ 1) ಹುಳವಿದ್ದ ಪೊಂಗಲ್ ಅನ್ನು ತನಗೆ ನೀಡಲಾಗಿತ್ತು ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದು ಅವರ ದೂರಿನ ಮೇರೆಗೆ, ಸಿಬ್ಬಂದಿ ಆಹಾರವನ್ನು ಬದಲಾಯಿಸಲು ಒಪ್ಪಿಕೊಂಡರು, ಆದರೆ ಅವರು ಗುವಾಹಟಿಗೆ ವಿಮಾನ ಹತ್ತುವ ಆತುರದಲ್ಲಿದ್ದ ಕಾರಣ ಅದನ್ನು ನಿರಾಕರಿಸಿದರು. ಇತರ ಗ್ರಾಹಕರು ಘಟನೆಯನ್ನು ಚಿತ್ರೀಕರಿಸಿ ಪೊಂಗಲ್‌ನಲ್ಲಿದ್ದ ಹುಳುವಿನ ಫೋಟೋ ತೆಗೆದಿದ್ದರು.
ಆದರೆ ಮರುದಿನ, ಕೆಫೆಯ ಕಾರ್ಯಾಚರಣೆ ಮುಖ್ಯಸ್ಥ ಸುಮಂತ್, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಗ್ರಾಹಕರ ಗುಂಪೊಂದು 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದೆ ಎಂದು ಆರೋಪಿಸಿ ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಪ್ರಕರಣ ದಾಖಲಿಸಿದ್ದರು.
ತನಿಖೆ ಮುಂದುವರಿಸಿದ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ನಿಖಿಲ್ ಮತ್ತು ಅವನ ಸ್ನೇಹಿತರನ್ನು ವಿಚಾರಣೆ ನಡೆಸಿದ ವೇಳೆ ನಿಖಿಲ್ ಬ್ಲ್ಯಾಕ್‌ಮೇಲ್ ಆರೋಪವನ್ನು ನಿರಾಕರಿಸಿದರು ಮತ್ತು ಕರೆ ದಾಖಲೆಗಳು ಮತ್ತು ಇತರ ಪುರಾವೆಗಳನ್ನು ಸಲ್ಲಿಸಿದರು. ನಂತರ ಪೊಲೀಸರು ನಿಖಿಲ್ ಮತ್ತು ಅವನ ಸ್ನೇಹಿತರು ಬಂಧಿತ ಶಂಕಿತನೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ನಂತರ ನಿಖಿಲ್, ರಾಮೇಶ್ವರಂ ಕೆಫೆ ಆಡಳಿತ ಮಂಡಳಿಯು ಕ್ರಿಮಿನಲ್ ಬೆದರಿಕೆ ಮತ್ತು ತನ್ನ ಖ್ಯಾತಿಗೆ ಹಾನಿ ಮಾಡಿದೆ ಎಂದು ಆರೋಪಿಸಿ ಪ್ರತಿದೂರು ದಾಖಲಿಸಿದ್ದಾರೆ.
ಡಿಸಿಪಿ ಸೂಚನೆಗಳ ಆಧಾರದ ಮೇಲೆ, ಪೊಲೀಸರು ರಾಘವೇಂದ್ರ ರಾವ್ ಮತ್ತು ಸುಮಂತ್ ವಿರುದ್ಧ ಹಾನಿಕಾರಕ ಆಹಾರವನ್ನು ಮಾರಾಟ ಮಾಡುವುದು, ಸುಳ್ಳು ಮಾಹಿತಿ ನೀಡುವುದು ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ ಮತ್ತು ಅವರ ಹೇಳಿಕೆಗಳನ್ನು ದಾಖಲಿಸಿದ ನಂತರ ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.





