
ಮಂಗಳೂರು: ಮಾರ್ಚ್ 28ರಂದು ಮಂಗಳ ಗಂಗೋತ್ರಿಯ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ 44ನೇ ಘಟಿಕೋತ್ಸವ ಸಮಾರಂಭವು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಈ ಕಾರ್ಯಕ್ರಮದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಪದ್ಮಶ್ರೀ ಹರೇಕಳ ಹಾಜಬ್ಬ, ಇತ್ತೀಚೆಗೆ ನಿಧನರಾದ ಯಕ್ಷಗಾನ ಕ್ಷೇತ್ರದ ಖ್ಯಾತ ಕಲಾವಿದ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಹಾಗೂ ಧೈವ ನೃತ್ಯದಲ್ಲಿ ಹೆಸರು ಮಾಡಿರುವ ರವೀಶ್ ಪಡುಮಲೆ ಅವರಿಗೆ ಈ ಗೌರವ ನೀಡಲಾಗುತ್ತದೆ ಎಂದು ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ.
ಹರೇಕಳ ಹಾಜಬ್ಬ:
ಕಿತ್ತಳೆ ಮಾರಾಟದಿಂದ ಜೀವನ ಆರಂಭಿಸಿ ಶಾಲೆ ನಿರ್ಮಿಸಿದ ಹರೇಕಳ ಹಾಜಬ್ಬ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಮಂಗಳೂರಿನ ಹರೇಕಳ-ನೂಪಡು ಗ್ರಾಮದಲ್ಲಿ ಶಾಲೆ ನಿರ್ಮಿಸಿ ಶಿಕ್ಷಣದ ಬೆಳಕು ಹರಡಿದ ಇವರಿಗೆ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸೂರಿಕುಮೇರು ಗೋವಿಂದ ಭಟ್:
ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಅಪಾರ ಕೊಡುಗೆ ನೀಡಿದ ಸೂರಿಕುಮೇರು ಗೋವಿಂದ ಭಟ್ (1938-2026) ದಿಗ್ಗಜ ಕಲಾವಿದರಾಗಿದ್ದರು. ದಕ್ಷಿಣ ಕನ್ನಡ ಮೂಲದ ಇವರು ಸುಮಾರು ಏಳು ದಶಕಗಳ ಕಾಲ ಯಕ್ಷಗಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಧರ್ಮಸ್ಥಳ ಮೇಳದಲ್ಲಿ 50ಕ್ಕೂ ಹೆಚ್ಚು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ರಕ್ತಬೀಜ, ಕೌರವ ಹಾಗೂ ಭೀಷ್ಮ ಪಾತ್ರಗಳ ಮೂಲಕ ಖ್ಯಾತಿ ಪಡೆದ ಇವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2016) ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಡಾ. ರವೀಶ್ ಪಡುಮಲೆ:
ಡಾ. ರವೀಶ್ ಪಡುಮಲೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೈವ ನರ್ತಕರಾಗಿದ್ದು ಚಿಂತಕ ಹಾಗೂ ವಾಗ್ಮಿಯಾಗಿ ಕೂಡ ಹೆಸರು ಪಡೆದಿದ್ದಾರೆ. ಉಜಿರೆಯ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ದೈವ ನೃತ್ಯದ ಪರಂಪರೆಯನ್ನು ಉಳಿಸಿಕೊಂಡು ಹಿಂದೂ ಸಂಸ್ಕೃತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.






















































