
ಮಂಗಳೂರು: ಮಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಸ್ಪೀಕರ್ ಕಚೇರಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು. ನಮಗೆ ಪ್ರಶ್ನೆ ಕೇಳಲು ಅವಕಾಶವಿಲ್ಲ. ಸಿಟ್ಟಿಂಗ್ ಜಡ್ಜ್ ಮೂಲಕ ಈ ಹಗರಣದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸಭಾ ಲಾಂಜ್ ಅನ್ನು ಮಸಾಜ್ ಪಾರ್ಲರ್ ರೀತಿಯಲ್ಲಿ ಮಾಡಿದ್ದಾರೆ. ಎಲ್ಲರಿಗೂ ಉಚಿತ ಆಹಾರ ಎಂದು ಹೇಳುತ್ತಾರೆ, ಆದರೆ ಅದರ ಲೆಕ್ಕಾಚಾರ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಎಲ್‌ಎಚ್ ವರಾಂಡದೊಳಗೆ ನಾಯಿ ತಿರುಗುತ್ತವೆ, ಆದರೆ ಸ್ಪೀಕರ್ ಸ್ಮಾರ್ಟ್ ಲಾಕ್ ಹಾಕಲು ಹೊರಟಿದ್ದಾರೆ. ಯು.ಟಿ. ಖಾದರ್ ಅವರಿಗೆ ‘ಸರ್ವಜ್ಞ ಸಿಂಡ್ರೋಮ್’ ಇದೆ. ಆರ್ಥಿಕ ಶಿಸ್ತು ಇಲ್ಲದೆ ಸರ್ಕಾರ ಮುಳುಗಿದೆ ಎಂದು ಭರತ್ ಶೆಟ್ಟಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ಪೀಕರ್ ಹುದ್ದೆಯನ್ನು ಲಾಭದಾಯಕ ಹುದ್ದೆಯನ್ನಾಗಿ ತೋರಿಸಿರುವವರು ಯುಟಿ ಖಾದರ್. ಶಾಸಕರಿಗೆ ಕೊಠಡಿಗಳನ್ನು ಕೊಡುತ್ತಾರೆ. ಆದರೆ ಪ್ಯಾಡ್ ಲಾಕ್ ಹಾಗೂ ಸ್ಮಾರ್ಟ್ ಲಾಕ್ ಹಾಕಿದ್ದಾರೆ. ಇದು ಸ್ಪೀಕರ್ ಆದೇಶದಿಂದ ಆಗಿದೆ ಎಂದು ಹೇಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಪುಸ್ತಕ ಮೇಳದ ಖರ್ಚುಗಳ ಬಗ್ಗೆಯೂ ಪ್ರಶ್ನಿಸಿದ ಭರತ್ ಶೆಟ್ಟಿ ಐದು ದಿನದ ಪುಸ್ತಕ ಮೇಳಕ್ಕೆ 4.5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ರಸ್ತೆ ನಿರ್ಮಾಣಕ್ಕೆ, ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವ ಕುರಿತು ಚರ್ಚೆ ಮಾಡುತ್ತಿದ್ದೇವೆ ಎಂದು ಡಾ. ಭರತ್ ಶೆಟ್ಟಿ ತಿಳಿಸಿದ್ದಾರೆ.



















































