
ನವದೆಹಲಿ: ಸರ್ಕಾರವು ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದ್ದು ಅದೇನಂದರೆ ದೇಶಸೇವೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ, ವೀರ ಪರಿವಾರ ಸಹಾಯತಾ ಯೋಜನೆ 2025 ಅಡಿಯಲ್ಲಿ ಹಾಲಿ ಮತ್ತು ನಿವೃತ್ತ ಯೋಧರಿಗೆ ಭೂ ವ್ಯಾಜ್ಯ, ಕೌಟುಂಬಿಕ ಕಲಹ ಮೊದಲಾದ ವಿಷಯಗಳಲ್ಲಿ ಉಚಿತ ಕಾನೂನು ನೆರವನ್ನು ಕೊಡಲು ಮುಂದಾಗಿದೆ.
ಭಾರತೀಯ ಸೈನಿಕರು ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರದ ವೇಳೆ ತೋರಿದ ಶೌರ್ಯ ಸಾಹಸ, ಬಲಿದಾನಗಳಿಂದ ಪ್ರಭಾವಿತರಾದ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರೂ ಆದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ನ್ಯಾ| ಸೂರ್ಯಕಾಂತ್ ಅವರು, ಯೋಧರ ಪರಿವಾರಗಳಿಗೆ ನೆರವಾಗಲು ಈ ಯೋಜನೆಯ ಯೋಚನೆ ಮಾಡಿದ್ದರು. ಈ ಮೂಲಕ, ದೇಶ ಕಾಯುವ ಯೋಧರ ಕೈ ಹಿಡಿಯಲು ನ್ಯಾಯಾಂಗವು ಮುಂದಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಈ ಯೋಜನೆಯನ್ನು 2025ರ ನ.24ರಂದು ನ್ಯಾ। ಕಾಂತ್ ಅವರು ಮುಖ್ಯ ನ್ಯಾಯಮೂರ್ತಿಯ ಹುದ್ದೆಗೆ ಬರುವ ಮುನ್ನ ಜಾರಿಗೆ ತರಲಾಗುವುದು.
ಮನೆಯಿಂದ ದೂರವಿರುವ ಸೈನಿಕರ, ಭೂಮಿ, ಆಸ್ತಿ, ಕೌಟುಂಬಿಕ ಬಿಕ್ಕಟ್ಟುಗಳಂತಹ ಸಮಸ್ಯೆಗಳು ಕಾನೂನು ಪ್ರಕ್ರಿಯೆಗಳಿಗೆ ಒಳಗಾಗಿದ್ದರೆ, ಬೇಕೆಂದಾಗ ಊರಿಗೆ ಮರಳಲಾಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಯೋಧರ ಕುಟುಂಬಕ್ಕೆ ಸೂಕ್ತ ರೀತಿಯ ಕಾನೂನು ನೆರವು ಸಿಕ್ಕಿರುವುದಿಲ್ಲ. ಹೀಗಿರುವಾಗ, ಅಂಥವರ ಅನುಕೂಲಕ್ಕಾಗಿ ನಾಲ್ಸಾ ಅವರ ನೆರವಿಗೆ ಬಂದು, ಸುಗಮ ಪ್ರಕ್ರಿಯೆಗೆ ಸಹಕಾರಿಯಾಗುತ್ತದೆ. ಈ ಸೌಲಭ್ಯವು ಬಿಎಸ್‌ಎಫ್, ಸಿಆರ್ ಪಿಎಫ್, ಐಟಿಬಿಪಿ ಸೇರಿದಂತೆ ಅರೆಸೇನಾಪಡೆಗಳಲ್ಲಿರುವವರಿಗೂ ಅನ್ವಯಿಸುತ್ತದೆ.