
ಬೆಂಗಳೂರು: ಚಿಕ್ಕಮಗಳೂರು ಜಿಲ್ಲಾಡಳಿತವು ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ ಚಾರಣಕ್ಕೆ ಬರುವ ಪ್ರವಾಸಿಗರ ಹುಚ್ಚಾಟ ಹಾಗೂ ಅನಿಯಂತ್ರಿತವಾಗಿ ಬರುತ್ತಿದ್ದ ಜನರಿಂದ ಭಾರೀ ಸಮಸ್ಯೆ ಎದುರಾದ ಬಳಿಕ ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು ಸೆಪ್ಟೆಂಬರ್ 1 ರಿಂದ ಬುಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಮಾಣಿಕ್ಯಧಾರಾ ಜಲಪಾತಗಳನ್ನು ಒಳಗೊಂಡಿರುವ ಚಂದ್ರದ್ರೋಣ ಗುಡ್ಡಗಾಡು ಪ್ರದೇಶಕ್ಕೆ ವರ್ಷದಿಂದ ವರ್ಷ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ಅಪಾರ ಜನದಟ್ಟಣೆಗೆ ಕಾರಣವಾಗಲಿದ್ದು ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು, ಜಿಲ್ಲಾಡಳಿತವು ಬುಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹೀಗಾಗಿ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿಗೆ ಹೋಗುವ ಪ್ರವಾಸಿಗರು ಈಗ ಆನ್‌ಲೈನ್‌ನಲ್ಲಿ ಮುಂಚಿತವಾಗಿ ಸ್ಲಾಟ್ ಬುಕಿಂಗ್ ಮಾಡಬೇಕಾಗುತ್ತದೆ.
ಜಿಲ್ಲಾ ಅಧಿಕೃತ ವೆಬ್‌ಸೈಟ್ https://chikkamagaluru.nic.in/en/tourism ಮೂಲಕ ಬುಕಿಂಗ್ ಮಾಡಬಹುದಾಗಿದ್ದು ಪ್ರವಾಸಿಗರು ಬೈಕ್‌ಗಳಿಗೆ 50 ರೂ., ಕಾರುಗಳಿಗೆ 100 ರೂ., ಮೋಟಾರ್ ವಾಹನಗಳಿಗೆ 150 ರೂ. ಮತ್ತು ಟೆಂಪೋ ಟ್ರಾವೆಲರ್‌ಗಳಿಗೆ 200 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಜೊತೆಗೆ ಆದ್ಯತೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ ಎರಡು ವಿಸಿಟಿಂಗ್ ಸ್ಲಾಟ್ ನಿಗದಿಪಡಿಸಲಾಗಿದ್ದು ಪ್ರತಿ ಸ್ಲಾಟ್‌ನಲ್ಲಿ 600 ವಾಹನಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಮುಂಚಿತವಾಗಿ ಬುಕ್ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.