
ಅಹಮದಾಬಾದ್: ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ವಿಮಾನ ಗುರುವಾರ ಮಧ್ಯಾಹ್ನ ಪತನಗೊಂಡು 265 ಜನರು ಮೃತಪಟ್ಟಿದ್ದು ಈ ದುರಂತದಲ್ಲಿ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಜೀವ ಉಳಿಸಿಕೊಂಡ ಅವರು, ದುರಂತದಿಂದ ಪಾರಾದ ಕ್ಷಣಗಳನ್ನು ವಿವರಿಸಿದ್ದಾರೆ.
ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ “ಪ್ರಧಾನಿ ಮೋದಿಯವರು ಘಟನೆ ಹೇಗೆ ಆಯ್ತು ಎಂದು ಕೇಳಿದರು. ನಾನು ಎಲ್ಲವನ್ನು ವಿವರಿಸಿದ್ದೇನೆ. ನನ್ನ ಕಣ್ಣ ಮುಂದೆಯೇ ಎಲ್ಲಾ ನಡೆದು ಹೋಯಿತು. ನಾನು ಬದುಕಿ ಬಂದಿರೋದು ಹೇಗೆ ಎಂದೇ ನನಗೆ ನಂಬಲು ಆಗ್ತಿಲ್ಲ. ಅಲ್ಲಿ ಕೆಲ ಕ್ಷಣ ನಾನು ಸತ್ತೇ ಹೋಗಿದ್ದೇನೆ ಎಂದು ಅನ್ನಿಸಿತ್ತು. ಆದರೆ ಕಣ್ಣು ಬಿಟ್ಟಾಗ ನಾನು ಬದುಕಿದ್ದೇನೆ ಎಂದು ಗೊತ್ತಾಯ್ತು.
ವಿಮಾನ ಟೇಕಾಫ್ ಆಗ್ತಿದ್ದಂತೆ ಏನೋ ಸಮಸ್ಯೆ ಆಗಿದೆ ಎಂದು ಗೊತ್ತಾಯ್ತು. 5ರಿಂದ 10 ಸೆಕೆಂಡ್ ವಿಮಾನ ಸ್ಟ್ರಕ್ ಆದಂತೆ ಅನ್ನಿಸಿತು. ವಿಮಾನದ ಒಳಗೆ ಹಸಿರು, ಬಿಳಿ ಬಣ್ಣದ ಲೈಟ್ ಆನ್ ಆಯ್ತು. ಕೆಲವೇ ಸೆಕೆಂಡ್‌ನಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿಯಾಯ್ತು. ಬಳಿಕ ವಿಮಾನ ಕಟ್ಟಡದ ಮೇಲಿಂದ ಕೆಳಗೆ ಇಳಿದಿತ್ತು. ನಾನು ಸೀಟ್ ಬೆಲ್ಟ್ ತೆಗೆದು, ಅಲ್ಲಿ ಸ್ವಲ್ಪ ಜಾಗ ಇರುವುದನ್ನು ಗಮನಿಸಿ ಎಮರ್ಜೆನ್ಸಿ ಬಾಗಿಲಿನ ಮೂಲಕ ನೆಲದ ಮೇಲೆ ಜಂಪ್ ಮಾಡಿ ಹೊರಗೆ ಬರಲು ಟ್ರೈ ಮಾಡಿದೆ. ಅದೃಷ್ಟವಶಾತ್ ಹೊರಗೆ ಬಂದೆ. ಆದರೆ ಕಟ್ಟಡದ ಗೋಡೆ ಅಡ್ಡ ಇದ್ದಿದ್ದರಿಂದ ಬೇರೆ ಯಾರು ಹೊರಗೆ ಬರಲು ಆಗಿಲ್ಲ. ನಾನು ಹೇಗೆ ಬದುಕಿ ಬಂದೆ ಎಂಬುದೇ ನನಗೇ ಆಶ್ಚರ್ಯ. ಅಲ್ಲಿ ಬೆಂಕಿ ಹೊತ್ತಿಕೊಂಡಾಗ ನನ್ನ ಎಡಗೈ ಕೂಡ ಸುಡಲು ಆರಂಭಿಸಿತು. ಆಗ ನಾನು ಅಲ್ಲಿಂದ ಓಡಿ ಬಂದೆ. ಆಗ ಯಾರೋ ನನ್ನನ್ನು ಎಳೆದು ಅಂಬುಲೆನ್ಸ್‌ನಲ್ಲಿ ಕೂರಿಸಿದರು” ಎಂದು ಕರಾಳ ಕ್ಷಣವನ್ನು ವಿವರಿಸಿದ್ದಾರೆ.



















