
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಈ ವರ್ಷದಿಂದ ಸುಮಾರು 1 ಕೋಟಿ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಆನ್-ಸ್ಕ್ರೀನ್ ಮಾರ್ಕಿಂಗ್ ಮೂಲಕ ಪರಿಶೀಲಿಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಸುಮಾರು 32 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತದೆ. ಆದರೆ 10ನೇ ತರಗತಿಯ ಮೌಲ್ಯಮಾಪನ ಹಿಂದಿನಂತೆಯೇ ಕಾಗದ ಆಧಾರಿತವಾಗಿಯೇ ಮುಂದುವರಿಯಲಿದೆ.
ಫೆಬ್ರವರಿ 17ರಿಂದ ಏಪ್ರಿಲ್ 10ರವರೆಗೆ ನಡೆಯುವ 12ನೇ ತರಗತಿ ಪರೀಕ್ಷೆಗಳ ಬಳಿಕ, ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರದಲ್ಲೇ ಸ್ಕ್ಯಾನ್ ಮಾಡಿ ಸುರಕ್ಷಿತ ವ್ಯವಸ್ಥೆಗೆ ಸೇರಿಸಲಾಗುತ್ತದೆ. ಮೌಲ್ಯಮಾಪಕರು ಡಿಜಿಟಲ್ ಪ್ರತಿಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡಲಿದ್ದು, ಒಟ್ಟು ಅಂಕಗಳ ಗಣನೆ ಸ್ವಯಂಚಾಲಿತವಾಗಿರುತ್ತದೆ. ವಿದ್ಯಾರ್ಥಿಗಳ ಹೆಸರು, ರೋಲ್ ಸಂಖ್ಯೆ ಗೋಚರಿಸದಂತೆ ವ್ಯವಸ್ಥೆ ಮಾಡಲಾಗಿದ್ದು, ಪಾರದರ್ಶಕತೆ ಹೆಚ್ಚಲಿದೆ.
ಮೌಲ್ಯಮಾಪನ ಪ್ರಕ್ರಿಯೆ ವೇಗವಾಗಿ ನಡೆಯಲಿದ್ದು, ಫಲಿತಾಂಶಗಳನ್ನು ನಿಗದಿತ ವೇಳೆಗೆ ಪ್ರಕಟಿಸಲು ಅನುಕೂಲವಾಗಲಿದೆ. ಅಗತ್ಯ ಸೌಕರ್ಯಗಳಿರುವ ಕಂಪ್ಯೂಟರ್ ಲ್ಯಾಬ್, ಕನಿಷ್ಠ 2 Mbps ಇಂಟರ್ನೆಟ್ ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಶಾಲೆಗಳು ಒದಗಿಸಬೇಕು. ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ತಾಂತ್ರಿಕ ನೆರವಿಗಾಗಿ ಕಾಲ್ ಸೆಂಟರ್‌ಗಳನ್ನೂ ಸ್ಥಾಪಿಸಲಾಗಿದೆ.



















