
ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಸಿಜೆ ರಾಯ್ ಅವರ ದುರಂತ ಅಂತ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದೆ. ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಜನವರಿ 30ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ದೇಶದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ದಾಳಿ ಹಾಗೂ ಮಾನಸಿಕ ಹಿಂಸೆ ಆರೋಪಗಳೂ ಕೇಳಿಬಂದಿದ್ದವು.
ಇದೀಗ ತನಿಖೆಯಲ್ಲಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ, ಅವರನ್ನು ಹನಿಟ್ರ್ಯಾಪ್ ಮಾಡಲಾಗಿದ್ದ ಕುರಿತು ಕೂಡ ಸಾಕ್ಷ್ಯಗಳು ದೊರೆತಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ. ಸಿನಿಮಾದೊಂದಿಗಿನ ಸಂಪರ್ಕ ಹೊಂದಿದ್ದ ನಟಿಯೊಬ್ಬರು ಹನಿಟ್ರ್ಯಾಪ್ ಮೂಲಕ ಹಣಕ್ಕೆ ಒತ್ತಾಯ ಮಾಡಿದ್ದರೆಂಬ ಸುಳಿವು ಸಿಕ್ಕಿದ್ದು, ಈ ಕುರಿತು ಎಸ್‌ಐಟಿ ತಂಡ ತನಿಖೆ ಮುಂದುವರಿಸಿದೆ.
ಸಿಜೆ ರಾಯ್ ಉದ್ಯಮ ಕ್ಷೇತ್ರದೊಂದಿಗೆ ಮಾತ್ರವಲ್ಲದೆ, ಸಿನಿಮಾ ಮತ್ತು ಮನರಂಜನಾ ಕ್ಷೇತ್ರದವರೊಂದಿಗೆ ಸಹ ಉತ್ತಮ ಸಂಪರ್ಕ ಹೊಂದಿದ್ದರು. ಹಲವು ಪ್ರಚಾರ ಕಾರ್ಯಗಳಲ್ಲಿ ನಟಿಯರು ಹಾಗೂ ಮಾಡೆಲ್ ಗಳನ್ನು ಬಳಸಿಕೊಂಡಿದ್ದು, ಸಿನಿಮಾ ನಿರ್ಮಾಣ ಮತ್ತು ರಿಯಾಲಿಟಿ ಶೋಗಳ ಪ್ರಾಯೋಜಕತ್ವದಲ್ಲೂ ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲೇ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿರುವುದು ತನಿಖೆಗೆ ಹೊಸ ಆಯಾಮ ನೀಡಿದೆ.
ಇದೀಗ ಪ್ರಕರಣದ ಅಂತಿಮ ವರದಿ ಸಿದ್ಧಪಡಿಸಲು ಪೊಲೀಸರು ನಿಮ್ಹಾನ್ಸ್ ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ. ಸಿಜೆ ರಾಯ್ ಅವರ ಕೊನೆಯ ಕ್ಷಣಗಳ ಮನಸ್ಥಿತಿ ಕುರಿತು ಮನೋವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತಿದ್ದು, ವೈದ್ಯರ ತಂಡವು ಅದರ ಆಧಾರದ ಮೇಲೆ ವಿವರವಾದ ವರದಿಯನ್ನು ನೀಡಲಿದೆ. ಈ ವರದಿ ಲಭ್ಯವಾದ ಬಳಿಕ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬರುವ ಸಾಧ್ಯತೆ ಇದೆ.






















































