“ಸಾಲು ಸಾಲು ಹೆಣಗಳು ಬಿದ್ದ ಮೇಲೂ ಮಸಾಲ್ ದೋಸೆ ಮೆಲ್ಲುವುದಕ್ಕೆ ಕರೆದೊಯ್ದರು ಎಂಬ ಕಾರಣಕ್ಕೋ ?… ಶಾಸಕ ವಿ. ಸುನಿಲ್ ಕುಮಾರ್ ವ್ಯಂಗ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೇಕು ಗೋವಿಂದರಾಜು ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಬಿಡುಗಡೆ ಮಾಡಲಾಗಿದೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಸಿದ ಶಾಸಕ ಬಿ ಸುನಿಲ್ ಕುಮಾರ್,ಸಿಎಂ ರವರೇ ನಿಮ್ಮ “ಸಯಾಮಿ” ಯಂತೆ ಸದಾ ಅಂಟಿಕೊಂಡೇ ಇರುತ್ತಿದ್ದ ಕೆ.ಗೋವಿಂದರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಿದ್ದೇಕೆ ?- ಗೋವಿಂದರಾಜ್ ಕೊಟ್ಟ ಸಲಹೆ ಆಧರಿಸಿ ಈ ಕಾರ್ಯಕ್ರಮ ನಡೆದಿದೆ ಎಂದಾದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂಬ ಭಯಕ್ಕಾ..?
ನಿಮ್ಮ ಪಕ್ಕದಲ್ಲೇ ಕುಳಿತು ಈ ನರಹತ್ಯೆಯ ಚಿತ್ರಕತೆ ಬರೆದರೆಂಬ ಕಾರಣಕ್ಕಾ ?- ಸಾಲು ಸಾಲು ಹೆಣಗಳು ಬಿದ್ದ ಮೇಲೂ ಮಸಾಲೆ ದೋಸೆ ಮೆಲ್ಲುವುದಕ್ಕೆ ಕರೆದೊಯ್ದರು ಎಂಬ ಕಾರಣಕ್ಕೋ ? ಅಥವಾ ಇದೆಲ್ಲವನ್ನು ಮೀರಿದ ಉನ್ನತ ಸಲಹೆಗಾಗಿಯೋ ? ಎಂದು ಶಾಸಕ ವಿ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ವಿಪಕ್ಷ, ಮಾಧ್ಯಮದ ಪ್ರಶ್ನೆಗೆ ಎಲ್ಲಿ ಸಾಕ್ಷಿ ಕೊಡು ಎಂದು ಮುಗಿ ಬೀಳುತ್ತಿದ್ದ ನೀವು ಈಗ ಇಡಿ ರಾಜ್ಯವೇ ಕಾರಣ ಕೇಳುತ್ತಿದ್ದರೂ ಬಾಯಿ ಬಿಗಿದು ಕುಳಿತಿದ್ದೇಕೆ ? 11 ಜನರ ಸಾವಿನ ಸಂಚು ಬಯಲಾಗುತ್ತದೆ ಎಂಬ ಭಯವೇ ? ಎಷ್ಟೇ ಬಚ್ಚಿಟ್ಟರೂ ಕಾಡುವ ಆತ್ಮಸಾಕ್ಷಿಗೆ ವಂಚನೆ ಮಾಡಲು ಸಾಧ್ಯವೇ ? ಸ್ವಾಮಿ…
ಈ ಹಿಂದೆ ನಿಮ್ಮ ಅಧೀನದಲ್ಲೇ ಬರುವ ಹಣಕಾಸು ಇಲಾಖೆಯ ಮೂಲಕ ಆದ ವಾಲ್ಮೀಕಿ ನಿಗಮದ ಅವ್ಯವಹಾರ ಸಂಬಂಧ ಯಾರನ್ನೋ ಬಲಿಪಶು ಮಾಡಿದಿರಿ. ಈಗ ನಿಮ್ಮದೇ ಅಧೀನದಲ್ಲಿ ಬರುವ ಡಿಪಿಎಆರ್ ಇಲಾಖೆ ಮೂಲಕ ಆದ ತಪ್ಪಿಗೆ ಇನ್ಯಾರನ್ನೋ ಬಲಿಪಶು ಮಾಡುತ್ತೀರಾ ?
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಸನ್ಮಾನ ಕಾರ್ಯಕ್ರಮ ಬೇಡ, ವಿಜಯೋತ್ಸವವೂ ಬೇಡ ಎಂದು ಡಿಪಿಎಆರ್ ಕಾರ್ಯದರ್ಶಿಗೆ ಪೊಲೀಸರು ಪತ್ರ ಬರೆದಿದ್ದರೂ ಈ ದುರಂತಕ್ಕೆ ಅವರನ್ನು ಹೊಣೆಗಾರರಾಗಿಸಿ ಅಮಾನತು ಮಾಡುವಾಗ ಕಾರಣಗಳ ಸರಮಾಲೆಯನ್ನೇ ಕೊಟ್ಟಿರಿ. ಆದರೆ ಗೋವಿಂದರಾಜ್ ವಿಚಾರದಲ್ಲಿ ಮಾತ್ರ ಏಕೆ ಮಗುಮ್ಮಾದ ಆದೇಶ ಹೊರಡಿಸಿದಿರಿ ಎಂದು ಪ್ರಶ್ನಿಸಿದ್ದಾರೆ.





