ಕಾರ್ಕಳ: ನಾವು ಪಡೆಯುವ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಹೊಂದಬೇಕಾದರೆ ಸಾಹಿತ್ಯ, ಕಲೆ ಅತಿ ಪ್ರಮುಖವಾದುದು. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಯಬೇಕಾದರೆ ಓದು ಅತಿ ಮುಖ್ಯ. ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಂಡಾಗ ಜೀವನದಲ್ಲಿ ನಿರಂತರವಾಗಿ ಸಂತೋಷವನ್ನು ಹೊಂದಬಹುದು ಎಂದು ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಅಧ್ಯಾಪಕ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ ಹೇಳಿದರು.
ಅವರು ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳೆರಡೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯಾಗಿದೆ.
ಮಾರ್ಕ್ಸ್ ಗಳಿಸುವುದೊಂದೇ ಶಿಕ್ಷಣದ ಪರಿಪೂರ್ಣತೆ ಅಲ್ಲ. ರಿಮಾರ್ಕ್ಸ್ ಇಲ್ಲದೆ ಜೀವನವನ್ನು ನಡೆಸುವಂತೆ ಮಾಡುವುದೇ ಶಿಕ್ಷಣ. ಅಂತಹ ಶಿಕ್ಷಣ ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸುವುದರಿಂದ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲಿನಿ ಕೆ, ಸಾಹಿತ್ಯ ಸಂಘದ ಮಾರ್ಗದರ್ಶಕಿ ಲವೀನಾ ಪಿಂಟೋ, ಸಾಂಸ್ಕೃತಿಕ ಸಂಘದ ಮಾರ್ಗದರ್ಶಕಿ ಅಂಬಿಕಾ ಅರುಣ್, ಜಯಲಕ್ಷ್ಮಿ ನಾಯಕ್, ಜ್ಯೋತಿ ಪಾಠಕ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ಪ್ರತಿನಿಧಿಗಳಾದ ಹತ್ತನೇ ತರಗತಿಯ ಕು. ಸುವೀಕ್ಷಾ ಸ್ವಾಗತಿಸಿದರು. ಕು.ಶಾನ್ವಿತಾ ನಿರೂಪಿಸಿದರು. ಕು. ವೈಭವಿ ವಂದಿಸಿದರು.