
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ದ್ವಿತೀಯ ಪಿಯುಸಿ ಪರೀಕ್ಷೆ ನಂತರವೂ ತಮ್ಮ ಕಾಲೇಜುಗಳಲ್ಲಿ ಪರಿಶೀಲಿಸಿಕೊಳ್ಳಲು ಅವಕಾಶ ಇರಲಿದ್ದು ಈ ವಿಷಯದಲ್ಲಿ ಆತಂಕಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದ್ದಾರೆ.
ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸುವ ಎಲ್ಲ ಅಭ್ಯರ್ಥಿಗಳಿಗೂ ಪ್ರವೇಶ ಪತ್ರವನ್ನು ನೀಡಲಾಗುತ್ತದೆ. ಕೇವಲ ದಾಖಲೆ ಪರಿಶೀಲನೆ ಮಾಡಿಸಿಕೊಂಡವರಿಗೆ ಮಾತ್ರ ಕೊಡಲಾಗುತ್ತದೆ ಎಂದು ಯಾರೂ ಭಾವಿಸುವುದು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕೇತರ ಅಭ್ಯರ್ಥಿಗಳು ಕೇವಲ ಬಿಎಸ್‌ಸಿ (ನರ್ಸಿಂಗ್) ಕೋರ್ಸಿಗೆ ಪ್ರವೇಶಾತಿಗೆ ಅರ್ಹತೆ ಪಡೆಯಲು ಸಿಇಟಿಯ ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳಿಗೆ ಹಾಜರಾಗಬೇಕು. ಆದರೆ, ಎಂಜಿನಿಯರಿAಗ್ ಮುಂತಾದ ಕೋರ್ಸ್ಗಳ ಪ್ರವೇಶಕ್ಕೆ ಅವರು ಅರ್ಹರಾಗುವುದಿಲ್ಲ. ಹಾಗೆಯೇ ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಕೂಡ ಇರುವುದಿಲ್ಲ. ಈ ಕುರಿತ ಹೆಚ್ಚಿನ ವಿವರಗಳಿಗೆ 2025ರ ಜನವರಿ 22ರಂದು ಹೊರಡಿಸಿರುವ ಅಧಿಸೂಚನೆಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಯುಜಿ ನೀಟ್-25ರಲ್ಲಿ ಅರ್ಹತೆ ಪಡೆಯಬೇಕು ಹಾಗೂ ಕಡ್ಡಾಯವಾಗಿ ಕೆಇಎನಲ್ಲಿ ನೋಂದಣಿ ಮಾಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿರಬೇಕು ಎಂದು ಮಾಹಿತಿ ನೀಡಿದ್ದಾರೆ.