‘ಒನ್ ಮ್ಯಾನ್ ಶೋ’ ವಿಚಾರ ನಾನು ನಂಬುವುದಿಲ್ಲ: ಸಚಿವ ಸತೀಶ್ ಜಾರಕಿಹೊಳೆ

ಬೆಳಗಾವಿ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾರೊಬ್ಬರ ಶ್ರಮದಿಂದ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ಎಲ್ಲೂರೂ ಶ್ರಮವೂ ಇದ್ದು ಹೀಗಾಗಿ ನಾನು ‘ಒನ್ ಮ್ಯಾನ್ ಶೋ’ ವಿಚಾರ ನಂಬುವುದಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಾರಾಗಬೇಕು ಯಾವಾಗ ಆಗಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಎರಡುವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ಮಾಡಬೇಕು ಎಂಬ ವಿಚಾರ ನನಗೆ ಗೊತ್ತಿಲ್ಲ. ನಮಗಿರುವ 1.25 ಕೋಟಿ ಮತದಾರರಿಂದ ನಾವು ಶಾಸಕರು, ಮಂತ್ರಿಯಾಗಿದ್ದು ಆದರೆ ತನ್ನಿಂದಲೇ ಸರ್ಕಾರ ರಚನೆಯಾಗಿದೆ ಎಂದು ಯಾರಾದರೂ ಹೇಳಿದರೆ ಅದನ್ನು ನಾನು ಒಪ್ಪುವುದಿಲ್ಲ. ಅದು ನ್ಯಾಯವೂ ಅಲ್ಲ, ಎಲ್ಲರಿಗೂ ಸಮಾನ ಪ್ರಾಧಾನ್ಯತೆ ಸಿಗಬೇಕು.
ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ ಪರಮೇಶ್ವರ್ ಅವರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಅವರ ಕಾಲದಲ್ಲಿ ಮಾಡಿದ ಕಾರ್ಯಕ್ರಮಗಳ ಕಾರಣದಿಂದ ಕಾಂಗ್ರೆಸ್ ಗೆ ಬಲ ಬಂದಿದೆ. ಸರ್ಕಾರ ರಚನೆ ಮಾಡುವಷ್ಟು ಪಕ್ಷವನ್ನು ಸಿದ್ಧಪಡಿಸಿದವರಲ್ಲಿ ಅವರು ಒಬ್ಬರಾಗಿದ್ದು ಅವರಿಗೂ ಅವಕಾಶ ಸಿಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದ್ದಾರೆ.



















