
ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದ್ದು ಈ ಕುರಿತು ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಂದರ್ಶನವೊಂದರಲ್ಲಿ ಈ ಸಿನಿಮಾದ ಹಿಂದಿನ ಶ್ರಮ, ಹೋರಾಟ,ಎದುರಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.
ಸಿನಿಮಾ ಎಂದಾಗ ಅದೊಂದು ಹೋರಾಟ. ಈ ಸಿನಿಮಾದಲ್ಲಿ ಮೂಲತಃ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷವಿದೆ. ಕಾಂತಾರ ಎಂದರೆ ನಿಗೂಢತೆ ತುಂಬಿರುವ ಕಾಡಾಗಿದ್ದು ಅಲ್ಲಿನ ಮೂಲನಿವಾಸಿಗಳು, ಬುಡಕಟ್ಟು ಬದುಕಿನ ಕತೆ ಇದೆ. ನಾವು ಈ ಸಿನಿಮಾ ಮಾಡಬೇಕು ಎಂದಾಗ ಬಹಳ ಅಧ್ಯಯನ ಮಾಡಿದ್ದೇವೆ. ಪ್ರೊಫೆಸರ್ ವಿವೇಕ್ ರೈ, ಚಿನ್ನಪ್ಪ ಗೌಡರು ಮತ್ತು ಈ ವಿಚಾರದಲ್ಲಿ ಅಧ್ಯಯನ ಮಾಡಿರುವವರನ್ನು ಸಂಪರ್ಕಿಸಿ ಈ ಕುರಿತು ಮಾಹಿತಿ ಪಡೆದುಕೊಂಡಿದ್ದೇವೆ. ಜೊತೆಗೆ ಹಳೆಯ ಪಾಡ್ದನಗಳ ಕತೆಯನ್ನು ಇಟ್ಟುಕೊಂಡು ನಮ್ಮದೇ ಕಲ್ಪನೆಯನ್ನು ಬಳಸಿ ಈ ಸಿನಿಮಾ ರೂಪಿಸಿದ್ದೇವೆ.
ಅಡೆತಡೆಗಳು ಇದ್ದಿದ್ದೇ. ಯಾವುದೂ ಸುಲಭವಾಗಿ ದಕ್ಕುವುದಿಲ್ಲ. ಪ್ರತಿದಿನ ಕಷ್ಟ ಎದುರಿಸಿಕೊಂಡೇ ಬಂದಿದ್ದೇವೆ. ಆದರೆ ಮಧ್ಯದಲ್ಲಿ ಕೆಲವು ಸಾವುಗಳಾದಾಗ ಕಾಂತಾರ ಸಿನಿಮಾ ವಿರುದ್ಧದ ನರೇಟಿವ್‌ಗಳು ಹುಟ್ಟಿಕೊಂಡವು. ಆದರೆ ಆ ಯಾವ ಸಾವುಗಳೂ ಕಾಂತಾರ ಸೆಟ್‌ನಲ್ಲಿ ಆಗಿರಲಿಲ್ಲ.
ನಾನು ದೈವ, ದೇವರನ್ನು ನಂಬುವವ. ಬದುಕಿನಲ್ಲಿ ಕೆಲವು ಹೇಳಲಾಗದ ಘಟನೆಗಳು ನಡೆದಾಗ, ಕೈಮೀರಿ ಕೆಲವು ಸಂದರ್ಭಗಳು ನಡೆದಾಗ ಮತ್ತು ಆ ಸಂದರ್ಭವನ್ನು ದಾಟಿ ಬಂದಾಗ ದೈವವೇ ನಮ್ಮನ್ನು ರಕ್ಷಿಸಿತು ಎಂಬ ಭಾವನೆ ನಮಗೆ ಬರುತ್ತದೆ. ಈ ಸಿನಿಮಾ ಮಾಡಬಾರದು ಎಂದಾಗಿದ್ದರೆ ದೈದವೇ ನಿಲ್ಲಿಸುತ್ತಿತ್ತು. ಹಾಗಾಗಲಿಲ್ಲ ಎಂದರೆ ದೈವವೇ ಈ ಸಿನಿಮಾ ಮಾಡಿಸಿದೆ. ದೈವಾನುಗ್ರಹದಿಂದ ಈ ಸಿನಿಮಾ ಕೆಲಸ ನಡೆದಿದೆ. ದೈವಾನುಗ್ರಹ ಇಲ್ಲದಿದ್ದರೆ ಹೀಗೆಲ್ಲಾ ಆಗುತ್ತಲೇ ಇರಲಿಲ್ಲ. ಕೆರಾಡಿ ಎಂಬ ಹಳ್ಳಿಯಿಂದ ಬಂದು ಕಾಂತಾರ ಸಿನಿಮಾ ಮಾಡಿ, ಅದು ಈ ಮಟ್ಟಕ್ಕೆ ಹೋಗಿ ಈಗ ಕಾಂತಾರ 1 ನಡೆದು ಈಗ ಹೊಂಬಾಳೆ ಫಿಲಂಸ್ ದೇಶದ ಅತ್ಯಂತ ಪವರ್‌ಪುಲ್ ನಿರ್ಮಾಣ ಸಂಸ್ಥೆ ಆಗಿದೆ. ಅಂಥಾ ವಿಜಯ್ ಕಿರಗಂದೂರು ಅವರು ಬಂದು ದೈವದ ಎದುರು ನಿಂತು ಆಶೀರ್ವಾದ ಬೇಡುತ್ತಾರೆ ಎಂದರೆ ಎಲ್ಲವೂ ದೈವಾನುಗ್ರಹವೇ ಅಲ್ಲವೇ ಎಂದು ಹೇಳಿದರು.






















































