
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ‘ನಮಗೆ ಸಾಮಾಜಿಕ ನ್ಯಾಯ ಬೇಕು. ಈ ಕಾರಣಕ್ಕೆ ನಾವು ಮತ್ತೊಮ್ಮೆ ಜಾತಿ ಜನಗಣತಿ ಮಾಡಲು ತೀರ್ಮಾನ ಮಾಡಿದ್ದೇವೆ. ಹೊಸ ಸಮೀಕ್ಷೆ ಬೇಡ ಎನ್ನುವುದಾದರೆ ಆರ್.ಅಶೋಕ್ ಹಾಗೂ ಬಿ.ವೈ.ವಿಜಯೇಂದ್ರ ಅವರು ಸುದ್ದಿಗೋಷ್ಠಿ ಮಾಡಿ ಹಳೆಯ ವರದಿಯನ್ನೇ ಅನುಷ್ಠಾನ ಮಾಡಲು ಒತ್ತಾಯಿಸಲಿ’ ಎಂದು ಸವಾಲೆಸೆದಿದ್ದಾರೆ.
ಈ ಹಿಂದಿನ ವರದಿ ಬಗ್ಗೆ ಟೀಕೆ ಮಾಡಿದ್ದ ವಿರೋಧ ಪಕ್ಷದವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಅಷ್ಟು ಖರ್ಚು ಮಾಡಿ ವರದಿ ಸಿದ್ಧಮಾಡಿ ಈಗ ಹೊಸ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಹೊಸ ಸಮೀಕ್ಷೆ ಬೇಡ ಎನ್ನುವುದಾದರೆ ಹಳೆಯ ವರದಿಯನ್ನೇ ಜಾರಿಗೊಳಿಸಲು ಒತ್ತಾಯಿಸಲಿ ಎಂದರು.
ಜಾತಿಗಣತಿ ವರದಿ ಬಗ್ಗೆ ಯಾರು ಏನು ಬೇಕಾದರೂ ಹೇಳಲಿ. ಜನರು, ಶಾಸಕರು ಹಾಗೂ ಮಂತ್ರಿಗಳ ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಕಾನೂನಿನಲ್ಲಿ ಏನು ಮಾಡಬೇಕೋ ಎಲ್ಲಾ ಮಾಡಿದ್ದೇವೆ. ನಾಳೆ ಬೆಳಗ್ಗೆ ಯಾರಾದರೂ ಕೋರ್ಟ್‌ಗೆ ಹೋದರೂ ಸಮಸ್ಯೆ ಆಗಬಾರದು. ಹೀಗಾಗಿ ಹೊಸ ಸಮೀಕ್ಷೆಗೆ ನಿರ್ಧರಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.



















