ಸಂಪೂರ್ಣ ಸುರಕ್ಷಿತವಾಗಿದೆ, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಕೆಎಂಎಫ್ ಸ್ಪಷ್ಟನೆ

ಬೆಂಗಳೂರು: ಹಲವು ದಿನಗಳಿಂದ, ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳು ಸೇವನೆಗೆ ಯೋಗ್ಯವಲ್ಲ ಎಂದು ಆಧಾರರಹಿತ ಪೋಸ್ಟ್ಗಳು ಹರಿದಾಡುತ್ತಿದ್ದು, ಇದೀಗ ಕೆಎಂಎಫ್ ಸ್ಪಷ್ಟನೆ ನೀಡಿದೆ.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಂಪೂರ್ಣ ಸುರಕ್ಷಿತ. ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಂದಿನಿ ಬ್ರಾಂಡ್ ನೊಂದಿಗೆ ದಶಕಗಳಿಂದ ಬೆಳೆದಿರುವ ಕೋಟ್ಯಾಂತರ ಗ್ರಾಹಕರಲ್ಲಿ ಅನಗತ್ಯ ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸುಳ್ಳು ಮಾಹಿತಿಗಳು ಸತ್ಯಕ್ಕೆ ದೂರವಾಗಿವೆ. ತಪ್ಪು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಸಂಬಂಧಪಟ್ಟ ವಿಭಾಗಗಳಿಗೆ ಸೂಚನೆ ನೀಡಲಾಗಿದೆ ಎಂದು ಮಹಾ ಮಂಡಳಿ ತಿಳಿಸಿದೆ.
ನಂದಿನಿ ಉತ್ಪನ್ನಗಳ ತಯಾರಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ .ಭಾರತೀಯ ಆಹಾರ ಸುರಕ್ಷಿತ ಮತ್ತು ಮಾನದಂಡ ಪ್ರಾಧಿಕಾರ ನಿಗದಿಪಡಿಸಿರುವ ಎಲ್ಲಾ ಸುರಕ್ಷಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇನ್ನು ಎಲ್ಲಾ ಉತ್ಪನ್ನಗಳನ್ನು ಗುಣಮಟ್ಟದ ಪರೀಕ್ಷೆಗಳ ನಂತರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





