
ಬೆಂಗಳೂರು: ಟೀಂ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 2024ರ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿದ ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂ. ಹಿಂದಿರುಗಿಸಿ, ಸಮಾನತೆ ಮೆರೆದಿದ್ದಾರೆ.
ಸಹಾಯ ಕೋಚ್ ಸಿಬ್ಬಂದಿಯಂತೆ ತಾವೂ 2.5 ಕೋಟಿ ರೂ.ಗಳನ್ನು ಮಾತ್ರ ಪಡೆಯಲಿದ್ದು, ಉಳಿದ ಹಣವನ್ನು ಹಿಂತಿರುಗಿಸಿದ್ದು ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬಿಸಿಸಿಐ ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನ ಮೊತ್ತದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಆಟಗಾರರು ತಲಾ 5 ಕೋಟಿ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ಅಲ್ಲದೇ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಅವರಿಗೂ ತಲಾ 1 ಕೋಟಿ ರೂ. ಬಹುಮಾನ ಸಿಗಲಿದೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಕುಮಾರ್ ಹಾಗೂ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಂಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಆದ್ರೆ ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರಿಗೆ 5 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದ್ರೆ ರಾಹುಲ್ ದ್ರಾವಿಡ್ 2.5 ಕೋಟಿ ರೂ. ಹೆಚ್ಚುವರಿ ಹಣವನ್ನು ಹಿಂದಿರುಗಿಸಿ, ಎಲ್ಲ ಕೋಚಿಂಗ್ ಸಿಬ್ಬಂದಿ ಪಡೆದಷ್ಟೇ ಹಣವನ್ನು ಪಡೆದುಕೊಂಡಿದ್ದಾರೆ.



















































