ಜನೌಷಧಿಯು ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ಮಾಡುವ ಯಾವುದೇ ಉದ್ದೇಶವಿಲ್ಲ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಜನೌಷಧಿಯು ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನ ಸ್ಥಗಿತಗೊಳಿಸಿಲ್ಲ. ಒಟ್ಟು 1,400 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನ ಮಾತ್ರ ತೆರವುಗೊಳಿಸಲು ಬಗ್ಗೆ ಚರ್ಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಸರ್ಕಾರವೇ ಉಚಿತವಾಗಿ ಔಷಧಿಗಳನ್ನ ನೀಡುವಾಗ, ಆಸ್ಪತ್ರೆಗಳಲ್ಲಿ ಔಷಧಿಗಳ ಮಾರಾಟ ಮಾಡುವ ಮೆಡಿಕಲ್ ಶಾಪ್‌ಗಳು ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಹಾಲಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರಗಳು ಇಲಾಖೆ ಮತ್ತು ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನ ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಲಾಗಿದೆ. ಕೆಲವು ಜನೌಷಧಿ ಕೇಂದ್ರಗಳು ಇತ್ತೀಚೆಗೆ ಆರಂಭವಾಗಿದ್ದು, ಅವರು ಸಾಕಷ್ಟು ಬಂಡವಾಳ ಹೂಡಿರುತ್ತಾರೆ. ಅವರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಅವರ ಒಪ್ಪಂದ ಮುಗಿದ ಬಳಿಕವೇ ಸ್ಥಗಿತಗೊಳಿಸುವ ಕುರಿತು ಆಲೋಚಿಸಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಬೆರೆಸುವುದು ಸರಿಯಲ್ಲ ಎಂದಿದ್ದಾರೆ.






















































