ಸರಕಾರಿ ಸಭೆ ಸಮಾರಂಭಗಳಲ್ಲಿ, ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ಬಳಕೆಗೆ ಆದೇಶ

ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಬಳಸುವಂತೆ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಸಾಂಪ್ರದಾಯಿಕ ಮತ್ತು ಸಾವಯವ ಸಿರಿಧಾನ್ಯಗಳನ್ನು ಪ್ರಜ್ಞಾವಂತರ ಆಹಾರವನ್ನ ಉತ್ತೇಜಿಸುತ್ತಿದ್ದು ಈಗಾಗಲೇ ಬಳಸಬಹುದಾದ ತಿಂಡಿ ತಿನಿಸುಗಳ ಪಟ್ಟಿಯನ್ನೂ ನೀಡಿದೆ. ರೈತಸಿರಿ ಯೋಜನೆಯಡಿ ಬೆಳೆ ಸಮೀಕ್ಷೆ ಆಧರಿಸಿ ಸಿರಿಧಾನ್ಯ ಬೆಳೆಸಿದ ರೈತರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂಗಳಂತೆ ಗರಿಷ್ಟ ಎರಡು ಹೆಕ್ಟೇರ್ ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಜೊತೆಗೆ ಸಿರಿ ಧಾನ್ಯಗಳ ಸಂಸ್ಕರಣೆ ಮೌಲ್ಯವರ್ಧನೆ ವರ್ಗೀಕರಣ ಪ್ಯಾಕಿಂಗ್ ಬ್ರಾಂಡಿಂಗ್ ಯಂತ್ರೋಪಕರಣಗಳಿಗೂ ಸಹಾಯಧನ ನೀಡುತ್ತಿದೆ.
ಸಾವಯವ ಮತ್ತು ಸಿರಿಧಾನ್ಯಗಳಿಗೆ ದೇಶಿ ಮತ್ತು ಜಾಗತಿಕ ಬೇಡಿಕೆ ಸೃಷ್ಟಿಸಲು ಹಾಗೂ ಜನರಿಗೆ ಪೌಷ್ಟಿಕಾಂಶದ ಆಹಾರದ ಬಗ್ಗೆ ಅರಿವು ಮೂಡಿಸಲು ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಅಧೀನ ಕಚೇರಿಗಳು, ನಿಗಮ, ಮಂಡಳಿಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು ಪಾನೀಯಗಳನ್ನು ಬಳಸುವಂತೆ ಆದೇಶ ನೀಡಿದೆ.
ಬಳಸಬಹುದಾದ ತಿಂಡಿ ತಿನಿಸುಗಳ ಪಟ್ಟಿ:
ಮಸಾಲ ಕುರುಕಲು ತಿಂಡಿ, ಸಿರಿಧಾನ್ಯಗಳ ಕುಕೀಸ್, ಸಿರಿಧಾನ್ಯಗಳ ಕ್ರಂಚ್ ಬಾರ್, ಸಿರಿಧಾನ್ಯಗಳ ಸಿಹಿತಿನಿಸು, ರಾಗಿ-ಬೆಲ್ಲದ ಬಿಸ್ಕತ್ತು, ಸಿರಿಧಾನ್ಯಗಳ ಪಫ್, ಕುರುಕಲು ಮಿಕ್ಸ್ಚರ್, ಸಿರಿಧಾನ್ಯಗಳ ಮೊಳಕೆ ಬಳಸಿದ ಬಿಸ್ಕತ್ತು, ರಿಬ್ಬನ್ ಪಕೋಡ, ಬೂಂದಿ, ಜೋಳದ ಪಾಪ್ಸ್, ಎನರ್ಜಿ ಬಾರ್, ಕೋಡುಬಳೆ ಹಾಗೂ ಮುರುಕು.









