
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ ಕಾಂಗ್ರೆಸ್ಸಿನಲ್ಲಿ ನವೆಂಬರ್-ಡಿಸೆಂಬರ್ ಕ್ರಾಂತಿಯಾಗಲಿದೆ. ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಸ್ತೆಯಲ್ಲಿರುವ ತಗ್ಗು-ಗುಂಡಿ ಮುಚ್ಚಿಸಲಾಗದ ಸಿದ್ದರಾಮಯ್ಯಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಕಾಂಗ್ರೆಸ್‌ಗೆ ಯಾವುದೇ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಆಡಳಿತಾತ್ಮಕವಾಗಿ ಅಧೋಗತಿಗೆ ಇಳಿದಿರುವ ರಾಜ್ಯ ಸರ್ಕಾರಕ್ಕೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ.
ಪ್ರಧಾನಿ, ರಾಷ್ಟ್ರಪತಿ, ಸಂಸದರು, ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು, ಸೋನಿಯಾ ಗಾಂಧಿಗೆ ಏಕವಚನದಲ್ಲೇ ಮಾತನಾಡುತ್ತಾರೆಯೇ? ಹಾಗೊಂದು ವೇಳೆ ಮಾತನಾಡಿದರೆ ಮರುಕ್ಷಣವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರು, ಅದರಲ್ಲೂ ಎರಡು ಬಾರಿ ಸಿಎಂ, ಪ್ರತಿಪಕ್ಷದ ನಾಯಕರಾದವರು ನಾಲಿಗೆಯ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು. ಸಂಸದ ತೇಜಸ್ವಿ ಸೂರ್ಯ ಅವರಿಗೆ ಅವಾಚ್ಯ ಪದ ಬಳಸಿ ಮಾತನಾಡಿದ್ದೀರಿ, ನಿಮಗೆ ನಾಚಿಕೆಯಾಗಬೇಕು. ನಿಮ್ಮ ಹಾಗೆ ಕೆಟ್ಟಭಾಷೆ ಬಳಸಲು ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ನಮಗೆ ಹೇಳಿ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.



















































