ಮೂಡುಬಿದಿರೆ ಇನ್ಸ್‌ಪೆಕ್ಟರ್ ಪ್ರಕರಣಕ್ಕೆ ಹೊಸ ತಿರುವು

ಮಂಗಳೂರು: ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ರಕ್ಷಣೆಗಾಗಿ ಬಂದ ಮಹಿಳೆಯರಿಗೆ ಅಸಭ್ಯ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪಗಳ ನಡುವೆ ಆಡಿಯೋ–ವಿಡಿಯೋಗಳು ವೈರಲ್ ಆಗಿದ್ದರೂ, ಸಂದೇಶ್ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಇದೀಗ ಆರೋಪ ಮಾಡಿದ್ದ ಮಹಿಳೆಯ ಸಹೋದರಿ ಮುಂದೆ ಬಂದು, ಇಡೀ ಪ್ರಕರಣ ಕುಟುಂಬ ಕಲಹದಿಂದ ಉಂಟಾಗಿದೆ ಎಂದು ಹೇಳಿದ್ದು, ಸಂದೇಶ್ ನಿರಪರಾಧಿ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವೈಯಕ್ತಿಕ ಸಮಸ್ಯೆಯಲ್ಲಿ ಪೊಲೀಸರು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಸಂದೇಶ್ ಉತ್ತಮ ವ್ಯಕ್ತಿ, ನನ್ನ ಸಹೋದರಿ ಇಲ್ಲ ಸಲ್ಲದ ದ್ವೇಷದಿಂದ ಹಗೆತನ ಸಾಧಿಸುತ್ತಿದ್ದಾರೆ. ಸಂದೇಶ್ ನ್ಯಾಯದ ಪರವಾಗಿದ್ದಾರೆ. ನಾನು ಸ್ವಯಂ ಆಗಿ ಹೇಳುತ್ತಿದ್ದೇನೆ, ನನಗೆ ಯಾರೂ ಈ ರೀತಿ ಹೇಳುವಂತೆ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರಿಗೆ ಪತ್ರ ಬರೆದು, ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಂದೇಶ್ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತೆ ಮಹಿಳೆ ಎಸಿಪಿ ಶ್ರೀಕಾಂತ್ ಕೃಪಾಕಟಾಕ್ಷ ಇನ್ಸ್ಪೆಕ್ಟರ್ ಸಂದೇಶ್ ಮೇಲಿದೆ ಎಂದು ಬಹಿರಂಗವಾಗಿಯೇ ಆರೋಪ ಮಾಡಿದ್ದರೂ ಸಹ ಈ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಎಸಿಪಿ ಶ್ರೀಕಾಂತ್‌ಗೆ ವಹಿಸಲಾಗಿದ್ದು, ಪೊಲೀಸ್ ಅಧಿಕಾರಿಗಳ ನಡೆ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.






