
ಹೊಸದಿಲ್ಲಿ: ಗುರುವಾರ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಆರ್ ಎಸ್ ಎಸ್ ಶತಮಾನೋತ್ಸವದ ಹಿನ್ನೆಲೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾನು 75 ವರ್ಷ ಪೂರೈಸಿದ ಬಳಿಕ ನಿವೃತ್ತಿ ಹೊಂದುವುದಾಗಿ ಎಂದಿಗೂ ಹೇಳಿಲ್ಲ ಅಥವಾ 75 ವರ್ಷಕ್ಕೆ ಎಲ್ಲರೂ ನಿವೃತ್ತಿ ಹೊಂದಬೇಕು ಎಂದು ಕೂಡ ಹೇಳಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಮೋಹನ್ ಭಾಗವತ್ ಅವರು ಕಾರ್ಯಕ್ರಮ ಒಂದರಲ್ಲಿ 75 ವರ್ಷಕ್ಕೆ ನಿವೃತ್ತಿ ಪಡೆಯುವ ಬಗ್ಗೆ ಮಾತನಾಡಿದ್ದು ಈ ಹೇಳಿಕೆಯನ್ನು ಉಲ್ಲೇಖಿಸಿ ವಿಪಕ್ಷಗಳು ಟೀಕೆ ಮಾಡಿದ್ದವು. ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಿದ ಭಾಗವತ್ ಅವರು ‘ನಾನು ನಿವೃತ್ತಿ ಬಗ್ಗೆ ಮಾತನಾಡಿದ್ದು, ಯಾವುದೋ ನಾಯಕನ ಅಥವಾ ನನ್ನ ನಿವೃತ್ತಿಯನ್ನು ಉಲ್ಲೇಖಿಸಿ ಅಲ್ಲ. ಸಂಘಕ್ಕೆ ಎಷ್ಟು ಕಾಲ ನಮ್ಮ ಸೇವೆ ಅಗತ್ಯವಿದೆಯೋ ಅಲ್ಲಿಯವರೆಗೆ ನಾವು ಸೇವೆ ಸಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.