
ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಬೇಸಿಗೆ ಶಿಬಿರ
ಕಾರ್ಕಳ : ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 06/04/2026 ರಿಂದ 11/04/2026 ರವರೆಗೆ “ಲೋಕಹಿತಂ” ಬೇಸಿಗೆ ಶಿಬಿರವು ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಈ ಶಿಬಿರದಲ್ಲಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹೊರಗಿನ ಶಾಲೆಗಳ ಮಕ್ಕಳು ಸಹ ಉತ್ಸಾಹದಿಂದ ಹಾಗೂ ಅರ್ಥಪೂರ್ಣ ಕಲಿಕೆಯಲ್ಲಿ ಭಾಗವಹಿಸಿದರು.
ಡಾ. ಹರ್ಷಾ ಕಾಮತ್ ಅವರು ಆಗಮಿಸಿ, ವಿದ್ಯಾರ್ಥಿಗಳಿಗೆ ವಿಶಿಷ್ಟ ಮತ್ತು ಸುಂದರವಾದ ಹವ್ಯಾಸವಾದ ದಾರದಿಂದ ಚಿತ್ರ ಬಿಡಿಸುವ ವಿಧಾನವನ್ನು ತಿಳಿಸಿಕೊಟ್ಟರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್ ಅವರು ಮಕ್ಕಳಿಗೆ ದಾನದ ಮಹತ್ವವನ್ನು ವಿವರಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಪೋಷಕರು ಅಕ್ಕಿ ಮತ್ತು ತೆಂಗಿನಕಾಯಿಗಳನ್ನು ದೇಣಿಗೆಯಾಗಿ ನೀಡಿದ್ದು, ಅವುಗಳನ್ನು ಕೊನೆಯ ದಿನದ ಅನ್ನಪ್ರಸಾದದಲ್ಲಿ ಬಳಸಲಾಯಿತು. ಅಗ್ನಿಶಾಮಕ ದಳದವರಿಂದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಶ್ರೀಮತಿ ಮಂಜುಳ ಭಟ್ ಇವರು ದೇಶಭಕ್ತಿ ಗೀತೆಯನ್ನು ಮಕ್ಕಳ ಮನಮುಟ್ಟುವಂತೆ ಬೋಧಿಸಿದರು.
ಸಾಂಪ್ರದಾಯಿಕ ಚಟುವಟಿಕೆಗಳಾಗಿ ಒಲೆ ಹಾಕುವುದು, ಸಂಡಿಗೆ ಹಾಕುವುದು, ಉಪ್ಪಿನಕಾಯಿ ತಯಾರಿಸುವುದು, ಹಲಸಿನಕಾಯಿ ಸೋಳೆ ಹಾಕುವುದು ಇತ್ಯಾದಿಗಳನ್ನು ಕಲಿಸಲಾಯಿತು. ಜೊತೆಗೆ ಬಟನ್, ಹುಕ್, ಚೈನ್ ಸ್ಟಿಚ್ ಮೊದಲಾದ ಹೊಲಿಗೆ ತರಬೇತಿಗಳನ್ನೂ ನೀಡಲಾಯಿತು. ಫೇಸ್ ಪೇಂಟಿಂಗ್, ನೃತ್ಯ ತರಬೇತಿ, ಗೋಶಾಲೆಗೆ ಭೇಟಿ ಹಾಗೂ ಗ್ರಾಮೀಣ ಜೀವನದ ಸರಳತೆ ಮತ್ತು ಸಮೃದ್ಧಿಯನ್ನು ಅನುಭವಿಸಲು ಪರಂಪರೆಯ ಮನೆಗೆ ಭೇಟಿ ನೀಡುವ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಯಿತು. ಇದರಿಂದ ಮಕ್ಕಳು ಸರಳ ಮತ್ತು ತೃಪ್ತಿದಾಯಕ ಜೀವನಶೈಲಿಯನ್ನು ಅನುಭವಿಸಿದರು.ಅರುಣ್ ಶೆಟ್ಟಿ ಇವರು ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡಿದರು.
ಪೋಷಕರಿಗಾಗಿ ಕ್ರೀಡೆಗಳು ಹಾಗೂ ಮಕ್ಕಳಿಂದ ನೃತ್ಯ ಪ್ರದರ್ಶನವೂ ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾ ಅಧ್ಯಕ್ಷರಾದ ಡಾ. ಪ್ರಶಾಂತ್ ಹೆಗ್ಡೆ ಹಾಗೂ ಸಲಹಾ ಸದಸ್ಯರಾದ ಶ್ರೀ ಕೀರ್ತನ್ ಶೆಣೈ ಅವರ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.
ಈ ಶಿಬಿರದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್, ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಮಕ್ಕಳ ಪೋಷಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.











