
ಇತ್ತೀಚಿನ ದಿನಗಳಲ್ಲಿ ಶಾಲಾ ಶಿಕ್ಷಣದಲ್ಲಿ ನೈತಿಕ ಹಾಗೂ ಮೌಲ್ಯ ಶಿಕ್ಷಣದ ಅವಶ್ಯಕತೆ ಇದೆ. ಪ್ರಸ್ತುತ ಸಮಾಜದ ಪರಿಸ್ಥಿತಿಯನ್ನು ಗಮನಿಸಿದಾಗ ಯುವ ಪೀಳಿಗೆಯು ತಪ್ಪಾದ ದಾರಿಯಲ್ಲಿ ಹೆಜ್ಜೆಯನ್ನು ಇಟ್ಟು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ನಮ್ಮ ನಾಡಿನಲ್ಲಿ ಪ್ರಸ್ತುತ ನಡೆಯುತ್ತಿರುವಂತಹ ಕೆಲವೊಂದು ಕುಕೃತ್ಯಗಳಿಗೆ ಕಾರಣವೇ ನೈತಿಕ ಮೌಲ್ಯದ ಕೊರತೆ. ಇಂತಹ ಮೌಲ್ಯಗಳನ್ನು ಮಕ್ಕಳಿಗೆ ನೀಡುವ ಜವಾಬ್ದಾರಿ ಹೆತ್ತವರದ್ದಾಗಿದೆ ಜೊತೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ವಿಷಯದ ಜೊತೆಗೆ ಪುರಾಣ ಇತಿಹಾಸಗಳ ಸ್ಪಷ್ಟವಾದ ಪರಿಚಯವನ್ನು ಮಾಡುವ ಕೆಲಸ ನಿರಂತರವಾಗಿ ಸಾಗಿದಾಗ ಮಾತ್ರ ಒಂದು ಸುಂದರ ಸಮಾಜ ನಿರ್ಮಾಣ ಸಾಧ್ಯ. ಇಂದು ನಿವೃತ್ತ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಪೈ ಇವರು ಹೇಳಿದರು.
ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ನಡೆದ, “ಭುವನ ಸಂಸ್ಕಾರ” ಎನ್ನುವ ಘೋಷ ವಾಕ್ಯದೊಂದಿಗೆ ನಿರಂತರವಾಗಿ ಸಾಗಿ ಬರಲಿರುವ ಭಗವದ್ಗೀತಾ ಪಠಣ ಹಾಗೂ ನೀತಿಕತೆಗಳನ್ನೊಳಗೊಂಡ ನೈತಿಕ ಹಾಗೂ ಮೌಲ್ಯ ಶಿಕ್ಷಣ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಇವರು ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು. ಶಿಕ್ಷಕಿ ಶ್ರೀಮತಿ ಜ್ಯೋತಿ ಹೆಗ್ಡೆ ಇವರು ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹರಿಶ್ಚಂದ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಒಂಬತ್ತನೆಯ ತರಗತಿಯ ವಿದ್ಯಾರ್ಥಿನಿ ಸಾನ್ವಿ ಜಿ. ಎಸ್.ಇವರು ಭಗವದ್ಗೀತೆಯಲ್ಲಿನ ಭಕ್ತಿಯೋಗದ ಶ್ಲೋಕಗಳನ್ನು ಪಠಿಸುವುದರ ಮೂಲಕ ಭುವನ ಸಂಸ್ಕಾರ ತರಗತಿಗೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























































