
ಕಾರ್ಕಳ:ವಿದ್ಯಾರ್ಥಿಗಳು ಆಸಕ್ತಿ ಮತ್ತು ಪರಿಶ್ರಮವಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲರು ಅನ್ನುವುದಕ್ಕೆ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.
ಮೋಜು ಮಸ್ತಿ ಅಂತ ತಿಳಿಯದೆ ದುಡಿಮೆಯ ಮಹತ್ವವನ್ನು ಅರಿಯಬೇಕು. ಕೃಷಿ ಲಾಭದಾಯಕವಲ್ಲದೆ ಹೋದರೂ ಇದರ ಪರಿಚಯ ನಮಗಿರಬೇಕು. ಅನುಭವಕ್ಕಾದರೂ ಕೆಸರಿಗೆ ಇಳಿಯಬೇಕು ಬದುಕಿಗೆ ಮಣ್ಣಿನ ಸೊಗಡಿಲ್ಲದೆ ಅರ್ಥವಿಲ್ಲ. ನಿಮಗೆ ಎಲ್ಲ ಶುಭವಿರಲಿ ಎಂದು ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿ ಸುಬ್ರಹ್ಮಣ್ಯ ದೇವಾಡಿಗ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದಲ್ಲಿ ” ಕೆಸರ್ ಡೊಂಜಿ ದಿನ 2025 ” ನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಕ್ಷೇಮಪಾಲನಾ ಅಧಿಕಾರಿಯಾದ ಡಾ.ಈಶ್ವರ ಭಟ್ ಪಿ.ಮಾತನಾಡುತ್ತಾ, ನಮ್ಮ ವಿದ್ಯಾರ್ಥಿಗಳ ಶೃದ್ದೆ ದೊಡ್ಡದು. ಇಲ್ಲಿಯ ಅನುಭವಗಳನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹಡಿಲು ಗದ್ದೆಯನ್ನು ಆಯ್ಕೆ ಮಾಡಿ ಅದರಲ್ಲಿ ಉತ್ತು ಬಿತ್ತುವ ಕೆಲಸ ಮಾಡಿ ಬೆಳೆಯನ್ನು ತೆಗೆದರೆ ನಿಮ್ಮ ಕೆಲಸ ಸಾರ್ಥಕವಾಗುತ್ತದೆ. ಪಠ್ಯಕ್ಕಿಂತ ಹೊರತಾದ ಇಂತಹ ಕಾರ್ಯಕ್ರಮಗಳು ಹೆಚ್ಚು ಕ್ರಿಯಾಶೀಲರಾಗಿ ಇರುವಂತೆ ಮಾಡುತ್ತದೆ ಎಂದರು.
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ಇವರು ಬದುಕಿನ ಚಟುವಟಿಕೆಯನ್ನು ಕೃಷಿಯ ಮೂಲಕ ಮಾಡಿದಾಗ ಅದಕ್ಕೆ ಮನ್ನಣೆ ಸಿಗುತ್ತದೆ. ವಿದ್ಯಾರ್ಥಿಗಳು ಕೆಸರಿನ ಗದ್ದೆಗೆ ಇಳಿದಾಗ ಹೆಚ್ಚು ಅನುಭವ ಪಕ್ವಗೊಳ್ಳಲು ಸಾಧ್ಯವಿದೆ.
ನಾವೆಲ್ಲ ಕೃಷಿ ಪರಂಪರೆಯಲ್ಲಿ ಬೆಳೆದು ಬಂದವರು. ನೀವೂ ಆ ಪರಂಪರೆಯನ್ನು ಗಮನಿಸಿದರೆ ಕೃಷಿಗೂ ಮಹತ್ವ ಸಿಗಲು ಸಾಧ್ಯವಿದೆ. ಕೃಷಿ ಪರಂಪರೆಗೆ ಬಳಕೆ ಮಾಡಿದ ಪರಿಕರಗಳ ಕುರಿತು ನಾವು ತಿಳಿದುಕೊಳ್ಳಬೇಕು. ತುಳುವಿನ ಅನೇಕ ಬಳಕೆಯ ಪದಗಳು ಮರೆಯಾಗಿವೆ.ಅದನ್ನೆಲ್ಲ ನಾವು ಅರಿತು ಭಾಷೆಯಲ್ಲಿ ಬಳಸಬೇಕಾದ ಅಗತ್ಯವಿದೆ. ನಾವು ನೋಡಿದಂತೆ ಯಾವುದೂ ಇಲ್ಲ. ಅನುಭವದಿಂದ ಮಾತ್ರವೇ ಎಲ್ಲವೂ ತಿಳಿಯಲು ಸಾಧ್ಯ. ಈ ದಿಸೆಯಲ್ಲಿ ಪತ್ಯೇತರ ಚಟುವಟಿಕೆಯಲ್ಲಿ ಇಂತಹ ನಿಮ್ಮ ಕಾರ್ಯ ಶ್ಲಾಘನೀಯ ಎಂದರು. ಇಂತಹ ಪರಂಪರೆಯೊಂದನ್ನು ಪ್ರಾರಂಭಿಸಿದ ಗೌರವ ನಿಮಗೆ ಸಲ್ಲತ್ತದೆ ಎಂದರು.
ಈ ಸಂದರ್ಭದಲ್ಲಿ ಗದ್ದೆಯ ಜಾಗವನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ ಪ್ರಶಾಂತ್ ಬಿಳಿರಾಯ ಗೌರವಿಸಲಾಯಿತು.
ವೇದಿಕೆಯಲ್ಲಿ ಎಲ್ಲ ಪ್ರಾಧ್ಯಾಪಕ ವರ್ಗದವರು ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಕಾಲೇಜಿನ ಕ್ರೀಡಾಧಿಕಾರಿ ನವೀನ್ ಚಂದ್ರ ಸ್ವಾಗತಿಸಿದರು. ಅಂತಿಮ ಬಿಸಿಎ ವಿದ್ಯಾರ್ಥಿನಿ ಹಿತ ಕಾರ್ಯಕ್ರಮ ನಿರೂಪಿಸಿ,ಅಂತಿಮ ಬಿಕಾಂ ನ ಅನನ್ಯ ವಂದಿಸಿದರು.
ಕೆಸರಿನ ಗದ್ದೆಯಲ್ಲಿ ಬೇರೆ ಬೇರೆ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.