
ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಹಾಗೂ ಶ್ರೀ ಭುವನೇಂದ್ರ ಕಾಲೇಜಿನ ಹೆಚ್.ಆರ್.ಡಿ.ಮತ್ತು ಪ್ಲೇಸ್ಮೆಂಟ್ ಸೆಲ್ ನ ಜಂಟಿ ಆಶ್ರಯದಲ್ಲಿ ಭುವನೇಂದ್ರ ಕಾಲೇಜಿನ ಎಲ್ಲ ಅಂತಿಮ ವಿಭಾಗದ ವಿದ್ಯಾರ್ಥಿಗಳಿಗಾಗಿ “ವೃತ್ತಿ ಸಮಾವೇಶ ಕಾರ್ಯಾಗಾರ”ವು ನೆರವೇರಿತು.
ಈ ಕಾರ್ಯಾಗಾರವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಉದ್ಯೋಗ ಮಾರ್ಗದರ್ಶನದ ಅಧಿಕಾರಿಯಾದ ಡಾ.ದಶರಥ ಪಿ.ಅಂಗಡಿಯವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ, ಭವಿಷ್ಯವನ್ನು ಬೆಳಗಿಸಲು ಇಂತಹ ಕಾರ್ಯಾಗಾರಗಳು ಬಹಳ ಅಗತ್ಯವಾಗಿರುತ್ತದೆ. ಜೀವನವನ್ನು ವ್ಯರ್ಥ ಮಾಡಬಾರದು. ಹಿಂದೆ ಇದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಾಂಧವ್ಯಗಳು ಬದಲಾಗಿವೆ. ಮನಸು ತೆರೆದು ಮುಕ್ತವಾಗುವ ಸನ್ನಿವೇಶ ಇಂದಿನ ವಿದ್ಯಾರ್ಥಿ ಪೀಳಿಗೆಗೆ ಇದೆ. ಆದರೂ ಆ ಮುಕ್ತತೆಯನ್ನು ಒಳ್ಳೆಯ ರೀತಿಯಲ್ಲಿ
ಬಳಸಿಕೊಂಡು ವಿದ್ಯಾರ್ಥಿ ಜೀವನವನ್ನು ಮುಂದುವರಿಸಬೇಕು ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹೆಚ್ಚು ತಿಳಿದುಕೊಳ್ಳಬೇಕು.
ದೇಶಕ್ಕೆ ಸಂಪನ್ಮೂಲ ಆಗುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು. ಜನಸಂಪರ್ಕ ಇದ್ದಾಗ ಹೆಚ್ಚು ಬೆಳೆಯಲು ಸಾಧ್ಯವಾಗುತ್ತದೆ. ಸಮಸ್ಯೆಗಳು ಬಂದಾಗ ಎದುರಿಸುವ ಆತ್ಮಶಕ್ತಿಯನ್ನು ಹೊಂದಿರಬೇಕು. ಬುದ್ಧಿವಂತಿಕೆ ಮತ್ತು ಅಪಾಯಕಾರಿ ಮನೋಭಾವ ಎರಡೂ
ನಮ್ಮಲ್ಲಿರುವುದರಿಂದ ಮಾನಸಿಕವಾಗಿ ಸದಾ ಜಾಗೃತರಾಗಿರಬೇಕು. ಪಠ್ಯ ವಿಷಯದ ಕುರಿತ ಜ್ಞಾನವನ್ನು ಹೊಂದಿರಲೇಬೇಕಾದ ಅನಿವಾರ್ಯತೆಯನ್ನು ನಾವೇ ಪಡೆದಿರಬೇಕು. ಓದಿದ್ದನ್ನು ಗಮನದಲ್ಲಿರಿಸುವ ಪ್ರಯತ್ನದ ಜೊತೆಗೆ ಬದುಕನ್ನು ಸಹನೀಯ ರೀತಿಯಲ್ಲಿ ಎದುರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ.ಕೋಟ್ಯಾನ್ ಮಾತನಾಡಿ ಅವಕಾಶಗಳು ಸಿಕ್ಕಾಗ
ಅದನ್ನು ಯಾರು ಸದುಪಯೋಗಪಡಿಸಿಕೊಳ್ಳುತ್ತಾರೆಯೋ ಅವರು ಬದುಕಿನಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಯಾವ ಕಷ್ಟಗಳೂ ಬದುಕಿನಲ್ಲಿ ಶಾಶ್ವತವಲ್ಲ. ಅವು ಬಂದು ಹೋಗುವ ಅತಿಥಿಗಳ ಹಾಗೆ. ಅವುಗಳನ್ನು ನಮ್ಮ ಜೊತೆಯೇ ಇರಿಸುವಂತೆ
ಮಾಡಬಾರದು. ಹೆಚ್ಚಿನ ಸಾಧಕರ ಸಾಧನೆಯ ಹಿಂದೆ ಬಡತನ ಇರುತ್ತದೆ ಹೌದಾದರೂ ಅದನ್ನೇ ಅಂತಿಮವಾಗಿರಿಸದೆ ಓದಿನಲ್ಲಿ ಕಠಿಣ ಪರಿಶ್ರಮ ಪಟ್ಟು ಯಶಸ್ವಿಯಾಗಿದ್ದಾರೆ. ಯಾವ ದಾರಿಯಲ್ಲಿ ಹೇಗೆ ಸಾಗಿದರೆ ಗೆಲುವು ಸಿಗುತ್ತದೆ ಅನ್ನುವುದಕ್ಕೆ ಮಾದರಿಯಾಗಿ ಇಂತಹ ಕಾರ್ಯಾಗಾರಗಳನ್ನು
ನಡೆಸುತ್ತೇವೆ. ಹೊಸ ವಿಚಾರಗಳ ಕುರಿತು ತಿಳಿಯುವ ಮನೋಭಾವ ಇದ್ದಲ್ಲಿ ಇದು ಸಹಕಾರಿಯಾಗುತ್ತದೆ ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಶಾರದಾ ಕಾಲೇಜು,ತಲಪಾಡಿ ಇಲ್ಲಿನ ಪ್ರಾಂಶುಪಾಲೆ ಮೀರಾ ಜೆ. ಪಣಿಕ್ಕರ್ ಇವರು ಆಗಮಿಸಿದ್ದರು. ಅವರು ಉದ್ಯೋಗವಕಾಶ ಹಾಗೂ ವಿದ್ಯಾರ್ಥಿಗಳು ಸಂದರ್ಶನಗಳನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಮಹೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಂತಿಮ ಬಿ.ಕಾಂ ನ ವಿದ್ಯಾರ್ಥಿನಿ ಮನಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಹ ಸಂಯೋಜಕಿ ಜೊಯ್ಲಿನ್ ವಂದನಾ ಕಬ್ರಾಲ್ ವಂದಿಸಿದರು.









