ಪೋಷಕರ ಸಭೆ, ಧಾರ್ಮಿಕ ಗುರುಗಳಾದ ಶ್ರೀ ಯೋಗರಾಜ್ ಶಾಸ್ತ್ರಿಯವರಿಗೆ ಸನ್ಮಾನ ಸಮಾರಂಭ

ಕಾರ್ಕಳದ ಹಿರಿಯಂಗಡಿಯಲ್ಲಿರುವ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ಆಗಸ್ಟ್ 31 ರಂದು ಭಾನುವಾರ ಪೋಷಕರ ಸಭೆಯು ಆಶ್ರಮದ ಸುಮ್ಮಗುತ್ತು ಎಸ್ ಆದಿರಾಜ್ ಹೆಗ್ಡೆ ಸ್ಮಾರಕ ಸಭಾಭವನದಲ್ಲಿ ನಡೆಸಲಾಯಿತು.
ಆಶ್ರಮದ ಕಾರ್ಯದರ್ಶಿಗಳು ಆಗಿರುವ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ ಕೆ ವಿಜಯ್ ಕುಮಾರ್ ಅವರು ಮಾತನಾಡಿ ಸಂಸ್ಥೆಯು 80 ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತ ಬಂದಿದೆ. ಸಂಸ್ಥೆಯ ಹುಟ್ಟಿಗೆ ನಾಡಿನ ಅನೇಕ ಗಣ್ಯರು ತಮ್ಮ ಸೇವೆ ಸಲ್ಲಿಸಿರುತ್ತಾರೆ. ಅವರನ್ನು ನೆನಪಿನಲ್ಲಿಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳುತ್ತಾ, ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರಸ್ತುತ ವರ್ಷದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಆಶ್ರಮದ ವಿದ್ಯಾರ್ಥಿಗಳ ಧಾರ್ಮಿಕ ಗುರುಗಳಾದ ಯೋಗರಾಜ್ ಶಾಸ್ತ್ರಿಯವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ತದ ನಂತರದಲ್ಲಿ ಆಶ್ರಮದ ಹಳೆ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಗುರುಗಳನ್ನು ಗೌರವಿಸಿ ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಹಿತೇಶ್ ಮತ್ತು ಸರ್ವಾರ್ಥ್ ಸಭೆಯಲ್ಲಿ ಪ್ರಾರ್ಥನೆಯನ್ನು ನೆರವೇರಿಸಿದರೆ, ಆಶ್ರಮದ ಮೇಲ್ವಿಚಾರಕರಾದ ವೀರೇಂದ್ರ ಜೈನ್ ಇವರು ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಅಧ್ಯಾಪಕರಾದ ಯೋಗರಾಜ್ ಶಾಸ್ತ್ರಿಯವರು ಪ್ರಸ್ತಾವನೆಗೈದರು. ನಿಲಯದ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಆಶ್ರಮ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಅನಂತರಾಜ್ ಪೂವಣಿ, ಉಸ್ತುವಾರಿ ಸಮಿತಿಯ ಸದಸ್ಯರಾದ ಬಿ. ಭರತ್ ರಾಜ್, ಅಶೋಕ್ ಬಲ್ಲಾಳ್, ಜಗದೀಶ್ ಹೆಗ್ಡೆ ಉಪಸ್ಥಿತರಿದ್ದರು. ಕೊನೆಯದಾಗಿ ಧನ್ಯವಾದ ಸಮರ್ಪಣೆಯನ್ನು ಯೋಗರಾಜ್ ಶಾಸ್ತ್ರಿಯವರು ನೆರವೇರಿಸಿದರು.