ಸಮಗ್ರ ಯೋಜನಾ ವರದಿ (DPR ) ತಯಾರಿಸಲು ಒಪ್ಪಿಗೆ ಸೂಚಿಸಿದ ಕೇಂದ್ರ ಸರ್ಕಾರ

ಹಾಸನ: ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್ ಫೀಲ್ಡ್ ಮಾರ್ಗ ನಿರ್ಮಾಣ ಕಾಮಗಾರಿ ಕುರಿತು ಸಮಗ್ರ ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ.
ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಹಾಸನ ಜಿಲ್ಲೆಯ ಮಲೆನಾಡು ಭಾಗದ ಶಾಸಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಇದೀಗ ಒಪ್ಪಿಗೆ ಸಿಕ್ಕಿದ್ದು ಆದರೆ ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪಶ್ಚಿಮಘಟ್ಟದಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಜೀವ ವೈವಿಧ್ಯತೆ ಮೇಲೆ ಮಾರಕ ಪರಿಣಾಮ ಬೀರಬಹುದು ಎನ್ನುವುದು ಪರಿಸರವಾದಿಗಳು ಹಾಗೂ ಮಲೆನಾಡು ಭಾಗದ ಜನರ ಆತಂಕವಾಗಿದ್ದು ರಸ್ತೆ ಅಗಲೀಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ, ಸುರಂಗ ಮಾರ್ಗ ಸ್ವಲ್ಪಮಟ್ಟಿಗೆ ಕಡಿಮೆ ಹಾನಿ ಮಾಡಬಹುದು ಎಂದು ಸರ್ಕಾರ ಬಿಂಬಿಸುತ್ತಿದ್ದರೂ ಪರಿಸರವಾದಿಗಳು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ.