
ಸುಳ್ಯ: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಂದೇಶ ಎಂಬ ಫೇಸ್ಬುಕ್ ಖಾತೆಯಿಂದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಅವಹೇಳನ ಮಾಡಿ ಪೋಸ್ಟ್ ಮಾಡಿರುವ ಘಟನೆ ನಡೆದಿದೆ.
ಭಾಗೀರಥಿ ಮುರುಳ್ಯ ಅವರ ಭಾವಚಿತ್ರ ಬಳಸಿ ಅವರನ್ನು ನಿಂದಿಸಿ ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದ್ದು ಇದಕ್ಕೆ ಬಾರಿ ಖಂಡನೆ ವ್ಯಕ್ತವಾಗಿದೆ. ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೋರಾಟದ ಎಚ್ಚರಿಕೆಯೂ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು “ಜನಪ್ರತಿನಿಧಿಗಳ ವಿರುದ್ಧ ವಿಶೇಷವಾಗಿ ಮಹಿಳಾ ಶಾಸಕರ ಮೇಲೆ ಅಸಭ್ಯ ಭಾಷೆ, ಬೆದರಿಕೆ ಅಥವಾ ಅವಮಾನಕಾರಿ ಹೇಳಿಕೆಗಳನ್ನು ಬಳಸುವುದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ಪ್ರಜಾಪ್ರಭುತ್ವದ ಮೌಲ್ಯಗಳು, ಮಹಿಳೆಯರ ಗೌರವ ಮತ್ತು ನಾಗರಿಕ ಸಂಸ್ಕೃತಿಯ ಮೇಲಿನ ನೇರದಾಳಿ. ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ಅಭಿವ್ಯಕ್ತಿಯ ಹೆಸರಿನಲ್ಲಿ ಅಸಭ್ಯತೆ, ದೌರ್ಜನ್ಯ ಮತ್ತು ಅಹಂಕಾರವನ್ನು ಸಮರ್ಥಿಸಲಾಗುವುದಿಲ್ಲ. ಇಂತಹ ವರ್ತನೆ ತೋರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜ ಇಂತಹ ಅಸಂಸ್ಕೃತ ವರ್ತನೆಯನ್ನು ಒಟ್ಟಾಗಿ ಖಂಡಿಸಬೇಕು. ಗೌರವವೇ ನಮ್ಮ ಸಂಸ್ಕೃತಿ” ಎಂದು ಹೇಳಿದೆ.
ಈ ಪೋಸ್ಟ್ ಹಾಕಿದ ಆರೋಪಿ ವಿರುದ್ಧ ಸದಾನಂದ ನಾವೂರು ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.






















































