
ಮೀರತ್: ಕಳೆದ ಎರಡು ದಿನಗಳ ಹಿಂದೆ ಹಾವು ಕಡಿತದಿಂದ ವ್ಯಕ್ತಿ ಸತ್ತಿದ್ದಾನೆಂದು ಬಿಂಬಿತವಾಗಿದ್ದ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ಅದೇನಂದರೆ ಮರಣೋತ್ತರ ಪರೀಕ್ಷೆ ವೇಳೆ ಅದು ಸಾವಲ್ಲ, ಕೊಲೆ ಎಂದು ಬಯಲಾಗಿದೆ.
ಮೀರತ್ನ ಅಕ್ಬರ್ಪುರ್ ಸಾದತ್ ಗ್ರಾಮದ ಅಮಿತ್ ಎಂಬಾತ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದು ಆತನ ಹಾಸಿಗೆ ಮೇಲೆ ಹಾವಿತ್ತು, ಕೈಯಲ್ಲಿ ಹಾವು ಹಚ್ಚಿದ್ದ 10 ಗಾಯಗಳಿತ್ತು. ಹೀಗಾಗಿ ಮೇಲ್ನೋಟಕ್ಕೆ ಅದು ಹಾವು ಕಡಿತದಿಂದಾದ ಸಾವೆಂದು ಹೇಳಿದ್ದರೂ ಕೂಡ ಹಾವು ಕಚ್ಚಿ ಓಡಿ ಹೋಗದೆ ಅಲ್ಲೇ ಇರುವುದು ಅನುಮಾನ ಸೃಷ್ಟಿಸಿತ್ತು. ಹಾವಾಡಿಗರನ್ನು ಕರೆಸಿ ಹಾವು ಹಿಡಿಯುವಷ್ಟರೊಳಗೆ ದೇಹ ಹಸಿರುಗಟ್ಟಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಅಷ್ಟರೊಳಗೆ ಕೊನೆಯುಸಿರೆಳೆದಿದ್ದ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಅಲ್ಲಿ ಬಂದ ವರದಿಯಲ್ಲಿ ಅಮಿತ್ ಸಾವು ಹಾವಿನ ಕಡಿತದಿಂದಾಗಿಲ್ಲ, ಹಾವು ಕಡಿದಿರುವ 10 ಗಾಯಗಳಿವೆ, ಅದರ ಜತೆಗೆ ದೇಹದಲ್ಲೂ ಬೇರೆ ಗಾಯಗಳಿವೆ. ಉಸಿರುಗಟ್ಟಿಸುವಿಕೆಯಿಂದ ಅವರ ಸಾವು ಸಂಭವಿಸಿದೆ ಎಂದು ವರದಿ ಬಿಡುಗಡೆ ಮಾಡಿದೆ.
ತನಿಖೆ ಮುಂದುವರಿಸಿದ ಪೊಲೀಸರು ಈ ಸಾವಿನ ಜಾಡು ಹಿಡಿದು ವಿಚಾರಣೆ ನಡೆಸಿದಾಗ ಅಮಿತ್ ಪತ್ನಿ ರವಿತಾ, ಅಮಿತ್ ಅವರ ಆಪ್ತ ಸ್ನೇಹಿತನೂ ಆಗಿದ್ದ ತನ್ನ ಪ್ರಿಯಕರ ಅಮರದೀಪ್ ಸಹಾಯದಿಂದ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ರವಿತಾ ಅಮರದೀಪ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದು ಈ ವಿಚಾರ ಅಂತಿಮವಾಗಿ ಅಮಿತ್ ಅವರಿಗೆ ತಿಳಿದಿದ್ದರಿಂದ ಆಗಾಗ ಜಗಳಗಳು ನಡೆಯುತ್ತಿತ್ತು. ತನ್ನ ಗಂಡನನ್ನು ಕೊಲ್ಲಲು ಮತ್ತು ಅನುಮಾನ ಬರದಂತೆ ತಡೆಯಲು, ರವಿತಾ ಎಚ್ಚರಿಕೆಯಿಂದ ಕೊಲೆಗೆ ಸಂಚು ರೂಪಿಸಿದ್ದಳು. 1,000 ರೂ.ಗೆ ಹಾವನ್ನು ಖರೀದಿಸಿ, ಅಮಿತ್ ಅವರನ್ನು ಕತ್ತು ಹಿಸುಕಿ ಕೊಂದು, ನಂತರ ಹಾವನ್ನು ಅವನ ದೇಹದ ಕೆಳಗೆ ಇಟ್ಟಿರುವುದಾಗಿ ವಿಚಾರಣೆ ವೇಳೆ ಅಸಲಿ ಸತ್ಯ ಬೆಳಕಿಗೆ ಬಂದಿದೆ.