
ನವದೆಹಲಿ: ಸುಪ್ರೀಂಕೋರ್ಟ್ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ವಿಚಾರಣೆ ನಡೆಸುತ್ತಿದ್ದು, 2024ನೇ ಸಾಲಿನ ನೀಟ್-ಯುಜಿ ಪರೀಕ್ಷೆಯ ನಗರವಾರು ಹಾಗೂ ಕೇಂದ್ರವಾರು ಸಂಪೂರ್ಣ ಫಲಿತಾಂಶವನ್ನು ಜು.20ರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸುವಂತೆ ಆದರೆ, ವಿದ್ಯಾರ್ಥಿಗಳ ಗುರುತನ್ನು ಮುಚ್ಚಿಡುವಂತೆ ತಾಕೀತು ಮಾಡಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ಆದೇಶಿಸಿದೆ.
ಈಗಾಗಲೇ ನೀಟ್-ಯುಜಿ ಫಲಿತಾಂಶ ಪ್ರಕಟವಾಗಿದ್ದರೂ, ನಗರವಾರು ಹಾಗೂ ಕೇಂದ್ರವಾರು ಫಲಿತಾಂಶ ಪ್ರಕಟಗೊಂಡಿರಲಿಲ್ಲ. ದೇಶದ ಕೆಲ ಪರೀಕ್ಷಾ ಕೇಂದ್ರ ಹಾಗೂ ಕೆಲ ನಗರಗಳಿಗೆ ಸೀಮಿತವಾಗಿ ಪರೀಕ್ಷಾ ಅಕ್ರಮಗಳು ನಡೆದಿದ್ದು, ಇಡೀ ದೇಶದಲ್ಲಿ ಅಕ್ರಮ ನಡೆದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ನಗರವಾರು ಹಾಗೂ ಕೇಂದ್ರವಾರು ಫಲಿತಾಂಶ ಪ್ರಕಟಿಸಿದರೆ ಅಕ್ರಮದ ಬಗ್ಗೆ ಒಂದು ಚಿತ್ರಣ ಲಭಿಸುತ್ತದೆ. ಆದ್ದರಿಂದ ಫಲಿತಾಂಶದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಮಗ್ರ ಫಲಿತಾಂಶ ಪ್ರಕಟಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
ಇದಕ್ಕೆ ಒಪ್ಪಿಗೆ ಸೂಚಿಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ತ್ರಿಸದಸ್ಯ ಪೀಠವು, ಜು.20ರಂದು ವೆಬ್‌ಸೈಟಿನಲ್ಲಿ ಸಂಪೂರ್ಣ ಫಲಿತಾಂಶ ಪ್ರಕಟಿಸಬೇಕು. ಆದರೆ, ವಿದ್ಯಾರ್ಥಿಗಳ ಗುರುತನ್ನು ಮಾಸ್ಕ್ ಮಾಡಬೇಕು. ಗೋಧ್ರಾ, ಪಟನಾ ಮತ್ತು ಹಜಾರಿಬಾಗ್ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಆ ಕೇಂದ್ರಗಳಿಗೆ ಮಾತ್ರ ಅಕ್ರಮ ಸೀಮಿತವಾಗಿದೆಯೋ ಅಥವಾ ಬೇರೆ ಕಡೆಗೂ ನಡೆದಿದೆಯೋ ಎಂಬುದನ್ನು ನೋಡಬೇಕಿದೆ. ಹೀಗಾಗಿ ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಿದರೆ ಅಕ್ರಮದ ಬಗ್ಗೆ ಒಂದು ಚಿತ್ರಣ ಲಭಿಸಲಿದೆ. ಆರೋಪಿತ ಪರೀಕ್ಷಾ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳಿಗೆ ಎಷ್ಟು ಅಂಕ? ಇತರ ಕೇಂದ್ರಗಳ ವಿದ್ಯಾರ್ಥಿಗಳಿಗೆ ಎಷ್ಟು ಅಂಕ ಎಂದು ಗೊತ್ತಾಗುತ್ತದೆ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತು.








