
ಹೊಸದಿಲ್ಲಿ: ಭಾರತೀಯ ರೈಲ್ವೆ ಇಲಾಖೆಯು ಹಲವಾರು ವರ್ಷಗಳಿಂದ ಒಂದೇ ದರವನ್ನು ನಿರ್ವಹಿಸುತ್ತಿದ್ದು ಇದೀಗ ರೈಲ್ವೆ ವೆಚ್ಚ ನಿರ್ವಹಣೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜುಲೈ 1 ರಿಂದ ಎಸಿ, ಎಸಿ ರಹಿತ, ಎಕ್ಸ್ಪ್ರೆಸ್ ಹಾಗೂ ದ್ವಿತೀಯ ದರ್ಜೆ ರೈಲುಗಳ ಟಿಕೆಟ್ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ರೈಲ್ವೆ ಅಧಿಕಾರಿಯೊಬ್ಬರು ದರಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲ. ಉಪನಗರ ರೈಲು ಹಾಗೂ ಮಾಸಿಕ ಪಾಸ್ ಗಳ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸಚಿವಾಲಯದಲ್ಲಿ ಈ ಬಗೆಗಿನ ಮಾತುಕತೆ ಅಂತಿಮ ಹಂತದಲ್ಲಿದ್ದು ಇನ್ನೊಂದು ವಾರದೊಳಗೆ ನಿರ್ಣಯ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ.
- ಎಸಿ ರಹಿತ ಎಕ್ಸ್ಪ್ರೆಸ್ ರೈಲು ಪ್ರತಿ ಕಿಲೋಮೀಟರ್ ಗೆ ಒಂದು ಪೈಸೆ ಹೆಚ್ಚಳ
- ಎಸಿ ರೈಲುಗಳ ಟಿಕೆಟ್ ಪ್ರತಿ ಕಿಲೋಮೀಟರ್ ಗೆ 2 ಪೈಸೆ ಹೆಚ್ಚಳ
- ಎರಡನೇ ದರ್ಜೆ ರೈಲು ಟಿಕೆಟ್ ನಲ್ಲಿ 500 ಕಿಲೋಮೀಟರ್ ವರೆಗೆ ಯಾವುದೇ ಹೆಚ್ಚಳ ಇಲ್ಲ
- 500 ಕಿಲೋಮೀಟರ್ ದಾಟಿದ ಬಳಿಕ ಪ್ರತಿ ಕಿಲೋಮೀಟರ್ ಗೆ ಅರ್ಧ ಪೈಸೆ ಏರಿಕೆ.






















































