
ಬೆಂಗಳೂರು: ವಿಶ್ವಹಿಂದು ಪರಿಷತ್ ನಾಯಕ ಶರಣ್ ಪಂಪ್ವೆಲ್ ಕುಂಜಾಲಿನಲ್ಲಿ ನಡೆದ ಗೋಹತ್ಯೆಯನ್ನು ಖಂಡಿಸಿ ಪತ್ರಿಕಾಗೋಷ್ಠಿಯಲ್ಲಿ ದ್ವೇಷಭರಿತವಾಗಿ ಮಾತನಾಡಿದ ಆರೋಪದಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಇದೀಗ ಹೈಕೋರ್ಟ್ ಶರಣ್ ಪಂಪ್ವೆಲ್ ಅವರನ್ನು ಬಂಧಿಸಬಾರದು ಮತ್ತು ಹೈಕೋರ್ಟ್ ಅನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ಆದೇಶ ನೀಡಿದೆ.
ಶರಣ್ ಪಂಪ್ ವೆಲ್ ತನ್ನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ನ್ಯಾ| ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ಪೀಠವು ಶರಣ್ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಆದೇಶಿಸಿ ಪ್ರತಿವಾದಿ ಉಡುಪಿ ಪೊಲೀಸ್ ಠಾಣೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಸೂಚನೆ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.






















































