
ಬಳ್ಳಾರಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಪ್ರವಾಸಿಗರ ಸ್ವರ್ಗ ತಾಣವಾಗಿರುವ ವಿಶ್ವವಿಖ್ಯಾತ ಹಂಪಿಯಲ್ಲಿ ಹೊಸ ವರ್ಷದ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸದೆ ಎಂದಿನಂತೆ ಪ್ರವಾಸಿಗರಿಗೆ ಹಂಪಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಧಾರ್ಮಿಕ ಕ್ಷೇತ್ರಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ಆದರೆ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಹಂಪಿ ಪ್ರವಾಸಕ್ಕೆ ಬರುವ ನಿರೀಕ್ಷೆಯಿದ್ದು ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಬರುವ ಸಾಧ್ಯತೆಯಿದೆ.