
ಸುಪ್ರೀಂಕೋರ್ಟ್ ಮಹತ್ವದ ತೀರ್ಪೋಂದನ್ನು ಹೊರಡಿಸಿದ್ದು ಅದೇನೆಂದರೆ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ರ ಅಡಿಯಲ್ಲಿ, ಮಾನ್ಯ ವಿವಾಹದ ಸಮಯದಲ್ಲಿ ಜನಿಸಿದ ಮಗುವನ್ನು ಪತಿಯ ಕಾನೂನುಬದ್ಧ ಮಗು ಎಂದೇ ಊಹಿಸಲಾಗುತ್ತದೆ ಅಂದರೆ ವಿವಾಹಿತೆಯ ಕಾನೂನುಬದ್ಧ ಗಂಡ ಆ ಮಗುವಿನ ಅಪ್ಪ ಎನ್ನಿಸಿಕೊಳ್ಳುತ್ತಾನೆ ಎಂದು ಕೋರ್ಟ್ ಆದೇಶಿಸಿದೆ.
ಆದರೆ ಒಂದು ವೇಳೆ, ವಿವಾಹದ ಬಳಿಕ ದಂಪತಿ ನಡುವೆ ಗರ್ಭ ಧರಿಸುವ ರೀತಿಯಲ್ಲಿ ದೈಹಿಕ ಸಂಪರ್ಕ ನಡೆಯದೇ ಹೋದರೆ ಆ ಸಮಯದಲ್ಲಿ ಕಾನೂನು ರೀತಿ ವಿಚಾರಣೆ ನಡೆಸಲು ಪತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಪತ್ನಿ ವ್ಯಭಿಚಾರಿಣಿ ಎಂದೇ ಅಥವಾ ಮಗುವಿನ ಡಿಎನ್ಎ ಪರೀಕ್ಷೆಯನ್ನು ನಡೆಸುವ ಮೂಲಕ ಇದು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಅನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಯಾವುದೇ ತಪ್ಪು ಮಾಡದ ಮಗುವನ್ನು ಕಳಂಕದಿಂದ ರಕ್ಷಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಮದುವೆಯಾದ ಬಳಿಕ ದಂಪತಿ ನಡುವೆ ದೈಹಿಕ ಸಂಬಂಧ ಇದ್ದರೆ, ಆ ಮಗು ಬೇರೆವರಿಗೆ ಹುಟ್ಟಿದರೂ ಮಹಿಳೆ ಕಾನೂನುಬದ್ಧ ಗಂಡನೇ ಆ ಮಗುವಿನ ಅಪ್ಪ ಆಗುತ್ತಾನೆ ಎಂದು ಹೇಳಿರುವ ಕೋರ್ಟ್ ಜೊತೆಗೆ ಇಂಥ ಪ್ರಕರಣಗಳಲ್ಲಿ ಡಿಎನ್ಎ ಪರೀಕ್ಷೆಗೆ ಆದೇಶಿಸುವಂತಿಲ್ಲ. ಮಗುವಿನ ಭಾವನಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವುದು, ಕುಟುಂಬದ ಖಾಸಗಿ ವಿಷಯಗಳನ್ನು ಮಗುವಿಗೆ ಕಳಂಕ ತರಲು ಬಳಸುವುದನ್ನು ತಡೆಯುವುದು ಈ ನಿಯಮದ ಗುರಿಯಾಗಿದೆ ಎಂದು ತಿಳಿಸಿದೆ.






