
ಗೊರೂರು : ಮಳೆಗಾಲದ ಇಂದಿನ ವಿಷಮ ಪರಿಸ್ಥಿತಿಯಲ್ಲಿ ವಿದ್ಯುತ್ ಅವಘಡಗಳು ಅತೀ ಹೆಚ್ಚಾಗಿ ನಡೆಯುತ್ತಿದೆ, ವಿದ್ಯುತ್ ಇಲಾಖೆಗಳ ಜವಾಬ್ದಾರಿಯುತ ಸೇವೆಗಳಿದ್ದರೂ ಕೆಲವೊಂದು ಕಠಿಣ ಸಂದರ್ಭಗಳಲ್ಲಿ ಸಮಸ್ಯೆ ಎದುರಿಸಲೇ ಬೇಕಾಗುತ್ತದೆ,ಅನಿವಾರ್ಯ ಸಂದರ್ಭಗಳಲ್ಲಿ ಆಚಾನಕ್ಕಾಗಿ ವಿದ್ಯುತ್ ಪ್ರವಹಿಸಿದಾಗ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ತಿಳಿದಿರುವುದಿಲ್ಲ,ತಕ್ಷಣಕ್ಕೆ ವಿದ್ಯುತ್ ನಿಂದ ರಕ್ಷಣೆ ಪಡೆಯುವುದು ಹೇಗೆ ಮತ್ತು ಜಾಗರೂಕರಾಗಿರುವ ವಿಚಾರಗಳನ್ನು, ಪ್ರಾತ್ಯಕ್ಷಿಕೆಯ ಮೂಲಕ ವಿದ್ಯುತ್ ತಂತಿಗಳನ್ನು ,ಎಲ್ಲಿಯೂ ಸ್ಪರ್ಶಿಸಬಾರದು ಇದರಿಂದ ಅನಾಹುತಗಳು ಹೆಚ್ಚು ಎಂದು ಗೊರೂರು ವಿದ್ಯುತ್ ಸರಬರಾಜು ಘಟಕದ ಜೂನಿಯರ್ ಇಂಜಿನಿಯರ್ ಆಗಿರುವ ಪುನೀತ್ ರವರು ಸರ್ಕಾರಿ ಪದವಿ ಪೂರ್ವ ಕಾಲೇಜು ಗೊರೂರು ಇಲ್ಲಿ 2024-25 ನೇ ಸಾಲಿನಲ್ಲಿ ಹೊಸದಾಗಿ ಆರಂಭಗೊಂಡ ವಿಜ್ಞಾನ ವಿಭಾಗದ, ಪ್ರಯೋಗಾಲಯಕ್ಕೆ ಉಚಿತವಾಗಿ ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸಿಕೊಟ್ಟು ಮಾಹಿತಿಗಳನ್ನು ಹಂಚಿಕೊಂಡರು,ಹಾಗೂ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅಂಕಗಳಿಸುವಲ್ಲಿ ಪ್ರೇರೇಪಿಸುತ್ತಾ ವಿಜ್ಞಾನ ವಿಭಾಗದ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮುವ ವಿದ್ಯಾರ್ಥಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸುತ್ತೇನೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಹಕಾರವಿತ್ತ ವಿದ್ಯುತ್ ಗುತ್ತಿಗೆದಾರರಾದ ಪ್ರಕಾಶ್ ಅರಳಿಕಟ್ಟೆಯವರು ಕೂಡ ಜೊತೆಗಿದ್ದು ವಿದ್ಯುತ್ ಅವಘಡಗಳ ಮಾಹಿತಿಗಳನ್ನು ಹಂಚಿಕೊಂಡರು.
ಸಂಸ್ಥೆಯ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವೇದಮೂರ್ತಿ ಗೊರೂರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಸ್ಥೆಗೆ ಬೇಕಾಗುವ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರಗಳನ್ನು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿಯೂ ಒದಗಿಸಿಕೊಡುವಲ್ಲಿ ಪ್ರಯತ್ನ ಪಡುತ್ತೇವೆ ವಿದ್ಯಾರ್ಥಿಗಳು ಓದಿನತ್ತ ಹೆಚ್ಚಿನ ಗಮನವನ್ನು ಕೊಡುವುದರೊಂದಿಗೆ ಸಂಸ್ಥೆಗೂ ಹೆತ್ತವರಿಗೂ ಋಣಿಗಳಾಗಿರಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶೋಭಾ ಡಿ ರವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಸಂಸ್ಥೆಯ ಎಲ್ಲ ಉಪನ್ಯಾಸಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.