
ಉಡುಪಿ: ಕರಾವಳಿಯಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದ್ದು ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದೆ.
ಬೇಸಿಗೆ ರಜೆ ಬಂದ್ರೆ ಸಾಕು ರಾಜ್ಯದ ಮೂಲೆ ಮೂಲೆಯಿಂದ ಜನ ಉಡುಪಿಗೆ ಪ್ರವಾಸಕ್ಕೆ ಬರುತ್ತಾರೆ. ಆದರೆ ಸಮುದ್ರದ ಅಲೆಗಳ ಜೊತೆಗೆ ಆಟವಾಡುವ ದ್ವೀಪದ ವಿಹಾರ ಮಾಡುವ ಆಸೆಗಳನ್ನು ಹೊತ್ತು ಬರುವ ಪ್ರವಾಸಿಗರಿಗೆ ಇದೀಗ ನಿರಾಸೆಯಾಗಿದೆ. ಮುಂದಿನ 4 ತಿಂಗಳು ಯಾವುದೇ ಬೋಟುಗಳು, ದೋಣಿಗಳು ಸೇಂಟ್ ಮೇರಿಸ್ ದ್ವೀಪಕ್ಕೆ ಹೋಗಲ್ಲ ಎಂದು ಸೂಚಿಸಲಾಗಿದೆ.
ವಿಭಿನ್ನ ಆಕಾರದ ಬಂಡೆಗಳಿಂದ ಫೇಮಸ್ ಆಗಿರುವ ಸೇಂಟ್ ಮೇರಿಸ್ ದ್ವೀಪದಲ್ಲಿ ಬಂಡೆಗಳ ಜೊತೆ ಫೋಟೋಶೂಟ್ ಮಾಡಲೆಂದೇ ಸಾವಿರಾರು ಪ್ರವಾಸಿಗರು ಪ್ರತಿನಿತ್ಯ ಉಡುಪಿಗೆ ಬಂದು ದ್ವೀಪದ ಕಡೆ ತೆರಳುತ್ತಾರೆ. ಮಳೆಗಾಲದಲ್ಲಿ ಪಾಚಿ ಕಟ್ಟಿದ ಬಂಡೆಗಳು ಅಪಾಯಕಾರಿ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸವನ್ನು ನಿರ್ಬಂಧ ಮಾಡಲಾಗುತ್ತದೆ. ಸಮುದ್ರದ ಅಬ್ಬರ ಅಲೆಗಳ ಹೊಡೆತ ಹೆಚ್ಚಾಗಿರುವ ಕಾರಣ ಪ್ರವಾಸಿ ಬೋಟ್ ಗಳು ಸಮುದ್ರಕ್ಕೆ ಇಳಿಯುವುದು ಅಪಾಯಕಾರಿಯಾಗಿರುವುದರಿಂದ ಸೇಂಟ್‍ಮೇರಿಸ್ ಪಿಕ್ ಪಾಯಿಂಟ್‍ನಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ತಬ್ಧ ಆಗಿದೆ. ಕರಾವಳಿಯ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಹಾರ್ಬರ್ ಕ್ರಾಫ್ಟ್ ನಿಯಮದಡಿ ನೀಡಲಾದ ಪರವಾನಿಗೆಯಂತೆ ಮಲ್ಪೆ ಬೀಚ್, ಸೀವಾಕ್ ಪ್ರದೇಶದಲ್ಲಿ ಓಡಾಟ ನಡೆಸುವ ಎಲ್ಲಾ ತರಹದ ಪ್ರವಾಸೀ ಬೋಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಕರಾವಳಿ ಪ್ರವಾಸಕ್ಕೆ ಬರುವವರು ತೀರದಿಂದಲೇ ಸಮುದ್ರ ನೋಡಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.