
ಮುಂಬೈ: ಪ್ರಧಾನಿ ನರೇಂದ್ರ ಮೋದಿ ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಅಯೋಧ್ಯೆ ರಾಮಮಂದಿರಕ್ಕೆ ಬುಲ್ಡೋಜರ್ ಹತ್ತಿಸಲಿದೆ’ ಎಂಬ ಹೇಳಿಕೆ ನೀಡಿದ್ದು ಇದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
‘ನಾವು ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧರಾಗಿದ್ದೇವೆ. ಬುಲ್ಡೋಜರ್ ಹತ್ತಿಸುವುದು ಬಿಜೆಪಿ ಸಂಸ್ಕೃತಿಯೇ ವಿನಾ ಕಾಂಗ್ರೆಸ್‌ನದ್ದಲ್ಲ. ದೇಶ ಸಂವಿಧಾನದ ಅನುಸಾರ ನಡೆಯಲಿದೆ’ ಎಂದು ಹೇಳಿದರು.
‘ಕಾಂಗ್ರೆಸ್ ಎಂದಿಗೂ ಮಾಡದ ಕೆಲಸಗಳ ಬಗ್ಗೆ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ. ನಾವು ಯಾರ ಮೇಲೂ ಬುಲ್ಡೋಜರ್ ಬಳಸಿಲ್ಲ. ಸುಳ್ಳು ಹೇಳುವುದು ಮತ್ತು ಜನರನ್ನು ಪ್ರಚೋದಿಸುವ ಅಭ್ಯಾಸವನ್ನು ಮೋದಿ ಹೊಂದಿದ್ದಾರೆ. ಮೋದಿ ಭಾಷಣವು ವಿಭಜನೆ ಮತ್ತು ಪ್ರಚೋದಿಸುವ ಉದ್ದೇಶದಿಂದ ಕೂಡಿದೆ. ಇಂತಹ ಪ್ರಧಾನಿಯನ್ನು ನಾನೆಂದೂ ನೋಡಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ನುಡಿದರು.
ಇದೇ ವೇಳೆ ಮಾತನಾಡಿದ ಉದ್ಧವ್ ಠಾಕ್ರೆ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಇಂಡಿಯಾ ಒಕ್ಕೂಟದ ಸರ್ಕಾರ ಪೂರ್ಣಗೊಳಿಸಲಿದೆ’ ಎಂದು ಹೇಳಿದರು.
‘ದೇವಾಲಯಗಳನ್ನು ಮಾತ್ರವಲ್ಲ, ಎಲ್ಲಾ ಧರ್ಮಗಳ ಪೂಜಾ ಸ್ಥಳಗಳನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯ’ ಎಂದು ಶರದ್ ಪವಾರ್ ಹೇಳಿದರು