
ಲಮಿನಾ ಫೌಂಡ್ರೀಸ್ ಲಿಮಿಟೆಡ್, ನಿಟ್ಟೆ ಸಂಸ್ಥೆಯ ಮಾಜಿ ಹಾಗು ನಿವ್ರತ್ತ ಉದ್ಯೋಗಿಗಳ ಒಕ್ಕೂಟದ ಸ್ನೇಹ ಸಮ್ಮಿಲನ ” ಸವಿನೆನಪು” ಕಾರ್ಕಳದ ಹೋಟೆಲ್ ಪ್ರಕಾಶ್ ನಲ್ಲಿ ಇತ್ತೀಚೆಗೆ ನೆರವೇರಿತು. ಸಂಸ್ಥೆಯ ಪೂರ್ವ ಆಡಳಿತ ಅಧಿಕಾರಿಯವರಾದ ಕ್ಯಾಪ್ಟನ್.ಎನ್.ಪ್ರಸನ್ನ ಹೆಗ್ಡೆ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಒಂದು ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸಂಸ್ಥೆಯಿಂದ ನಿರ್ಗಮಿಸಿದ ಬಳಿಕವೂ ಒಂದು ಒಕ್ಕೂಟವನ್ನು ರಚಿಸಿ ಒಂದಾಗಿ ಸ್ನೇಹ ಸಮ್ಮಿಲನದಂತಹ ಕಾರ್ಯಕ್ರಮವನ್ನು ಮಾಡುತ್ತಿರುವುದು ಮಾನವೀಯ ಸಂಬಂಧಗಳ ಮೌಲ್ಯ ವರ್ಧನೆಗೆ ಹಿಡಿದ ಕೈಗನ್ನಡಿ ಎಂದು ಮೆಚ್ಚುಗೆಯ ಮಾತನ್ನಾಡಿದರು. ಸಂಸ್ಥೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಉದ್ಯೋಗಿಗಳಲ್ಲಿ ವಯೋಮಿತಿಯನ್ನು ಗಮನದಲ್ಲಿರಿಸಿ ಅನಿಲ್ ಪ್ರಭು, ವಸಂತ್ ಆಚಾರಿ, ನಾರಾಯಣ ಪೂಜಾರಿ, ಗಿರಿಯಪ್ಪ, ಯು.ಕೆ.ಜನಾರ್ಧನ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕರುಣಾಕರ್ ಶೆಟ್ಟಿ ಪ್ರಾರ್ಥನೆಗೈದರು. ಒಕ್ಕೂಟದ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಯವರು ಸ್ವಾಗತಿಸಿದರು. ಗೋಪಾಲ್ ಮೂಲ್ಯ ಧನ್ಯವಾದ ನೀಡಿದರು. ಪ್ರಕಾಶ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳಾಗಿ ಎನ್.ಡಿ.ಶೆಣೈ, ಎಂ.ಆರ್.ಕಾಮತ್, ಜೆ.ಪಿ.ಮೆಂಡೋನ್ಸ, ಶ್ರೀಮತಿ ಚಂದ್ರಲೇಖಾ ಪ್ರಸನ್ನ ಹೆಗ್ಡೆ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಒಕ್ಕೂಟದ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಕಾರ್ಯದರ್ಶಿ ಶ್ರೀ ಧರ ಗೌಡ, ಕೋಶಾಧಿಕಾರಿ ಪಿ.ಎಸ್.ಭಟ್ ಸಹಕರಿಸಿದರು.



















































